Belagavi NewsKarnataka NewsPolitics

*ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ವಾಪಸ್: ನಾಳೆಯಿಂದ ಸಕ್ಕರೆ ಕಾರ್ಖಾನೆ ಆರಂಭ: ಚುನಪ್ಪ ಪೂಜಾರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿನ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಘೋಷಿಸಿದ್ದಾರೆ.

ಪೊಲೀಸರ ವಶದಿಂದ ಬಿಡುಗಡೆಯಾದ ಬಳಿಕ ಬೆಳಗಾವಿಯ ಪೊಲೀಸ್ ಕ್ವಾರ್ಟರ್ಸ್‌ನ ವೀರಭದ್ರ ದೇವಸ್ಥಾನದಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು ನಾಳೆಯಿಂದ ಕಾರ್ಯಾರಂಭ ಮಾಡಲಿದ್ದು, ಯಾವುದೇ ರೈತರು ಕಾರ್ಖಾನೆಗಳ ಆರಂಭಕ್ಕೆ ಅಡ್ಡಿಪಡಿಸಬಾರದು ಎಂದು ಮನವಿ ಮಾಡಿದರು.

ಗುರ್ಲಾಪುರದಲ್ಲಿಯೂ ಹೋರಾಟವನ್ನು ಹಿಂಪಡೆಯಲಾಗಿದ್ದು, ನಾಳೆ ಅಲ್ಲಿ ರೈತರೆಲ್ಲರೂ ಸೇರಿ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ರೈತ ಮುಖಂಡರೊಂದಿಗೆ ಮಾತನಾಡಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ್ದರು. ಪ್ರತಿಭಟನೆ ಮುಂದುವರಿಸುವುದರಿಂದ ಆಗುವ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಕಬ್ಬಿನ ಟನ್‌ಗೆ ₹3,800 ದರ ನೀಡುವಂತೆ ರೈತರು ಬೇಡಿಕೆ ಇಟ್ಟಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಧ್ಯಸ್ಥಿಕೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ₹3,600 ದರ ನೀಡಲು ಒಪ್ಪಿಕೊಂಡಿದ್ದಾರೆ. ಈ ದರ ನಿಗದಿ ನಮಗೆ ತೃಪ್ತಿ ತಂದಿದೆ ಎಂದು ಚೂನಪ್ಪ ಪೂಜಾರಿ ಹೇಳಿದರು.

ಇದೇ ಮೊದಲ ಬಾರಿಗೆ ಸಕ್ಕರೆ ಮಾರಾಟದಿಂದ ಬರುವ ಲಾಭಾಂಶದಲ್ಲಿಯೂ ರೈತರಿಗೆ ಪಾಲು ನೀಡಲು ಕಾರ್ಖಾನೆಗಳು ಒಪ್ಪಿಕೊಂಡಿವೆ. ಈ ಹಿಂದೆ ಇಂತಹ ಲಾಭಾಂಶ ರೈತರಿಗೆ ದೊರೆಯುತ್ತಿರಲಿಲ್ಲ. ಸಕ್ಕರೆಯ ಮಾರಾಟ ದರದಲ್ಲಿ ಪ್ರತಿ ₹50 ಹೆಚ್ಚಳವಾದಾಗ ರೈತರಿಗೆ ಹೆಚ್ಚುವರಿ ಹಣ ದೊರೆಯುವ ವ್ಯವಸ್ಥೆಗೆ ಒಪ್ಪಿಗೆ ಸಿಕ್ಕಿದೆ. ಇದು ರೈತರ ಹೋರಾಟಕ್ಕೆ ಮೊದಲ ಹಂತದ ಜಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆದರೆ, ಸರ್ಕಾರ ಘೋಷಿಸಿರುವ ಪ್ರತಿ ಟನ್ ಕಬ್ಬಿಗೆ ₹1,000 ಪ್ರೋತ್ಸಾಹಧನದ ಬೇಡಿಕೆ ಇನ್ನೂ ಬಾಕಿ ಇದೆ. ಬೆಳಗಾವಿ ಅಧಿವೇಶನದ ಒಳಗಾಗಿ ಮುಖ್ಯಮಂತ್ರಿ ಈ ಹಣವನ್ನು ಘೋಷಿಸಬೇಕು. ಇಲ್ಲದಿದ್ದರೆ ಅಧಿವೇಶನದ ಸಂದರ್ಭದಲ್ಲಿ ಮತ್ತೆ ಹೋರಾಟ ನಡೆಸಿ ಪ್ರೋತ್ಸಾಹಧನ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕಬ್ಬಿನ ದರ ನಿಗದಿ ವಿಚಾರದಲ್ಲಿ ಮೊದಲ ಹಂತದ ಒಪ್ಪಂದದೊಂದಿಗೆ ರೈತರ ಹೋರಾಟ ಸದ್ಯಕ್ಕೆ ತಾತ್ಕಾಲಿಕ ವಿರಾಮ ಪಡೆದಿದ್ದು, ಸರ್ಕಾರದ ₹1,000 ಪ್ರೋತ್ಸಾಹಧನದ ನಿರ್ಧಾರದತ್ತ ರೈತರ ಚಿತ್ತ ನೆಟ್ಟಿದೆ.

Related Articles

Back to top button