*ರಿಪಬ್ಲಿಕನ್ ಸೋಲಿನ ಬೆನ್ನಲ್ಲೇ ಪೋಸ್ಟ್ಗಳು ಡಿಲೀಟ್*: *ಒಂದೇ ದಿನದಲ್ಲಿ ಮಸ್ಕ್ ಸಂಪತ್ತಿಗೆ ಭಾರಿ ಹೊಡೆತ*

ಪ್ರಗತಿವಾಹಿನಿ ಸುದ್ದಿ: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ, ಉದ್ಯಮಿ ಎಲಾನ್ ಮಸ್ಕ್ ತಮ್ಮ ಹಳೆಯ ಚುನಾವಣಾ ಪ್ರಚಾರದ ಪೋಸ್ಟ್ಗಳನ್ನು ಅಳಿಸುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ಅಮೆರಿಕನ್ನರಲ್ಲಿ ಮನವಿ ಮಾಡಿದ್ದ ಪೋಸ್ಟ್ಗಳನ್ನು ಮಸ್ಕ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಿಂದ ತೆಗೆದುಹಾಕಿರುವುದು ಎಕ್ಸ್ ಬಳಕೆದಾರರ ಗಮನ ಸೆಳೆದಿದೆ.
ಅಕ್ಟೋಬರ್ 29ರಂದು ಮಸ್ಕ್ ಹಂಚಿಕೊಂಡು ತಮ್ಮ ಪ್ರೊಫೈಲ್ನಲ್ಲಿ ಪಿನ್ ಮಾಡಿದ್ದ ಪ್ರಮುಖ ಪೋಸ್ಟ್ ಬುಧವಾರ ಮುಂಜಾನೆ ಕಾಣೆಯಾಗಿದೆ. ಈ ಪೋಸ್ಟ್ನಲ್ಲಿ ರಿಪಬ್ಲಿಕನ್ ಸೆನೆಟರ್ಗಳಿಗೆ ಮತ ನೀಡುವಂತೆ ಅವರು ಮನವಿ ಮಾಡಿದ್ದರು. ಟೆಕ್ಸಾಸ್ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೇಮ್ಸ್ ತಲಾರಿಕೊ ಗೆಲುವು ಸಾಧಿಸಿದ ಬೆನ್ನಲ್ಲೇ ಈ ಪೋಸ್ಟ್ ತೆಗೆದುಹಾಕಲಾಗಿದೆ. ಮಸ್ಕ್ ಬೆಂಬಲಿಸಿದ್ದ ರಿಪಬ್ಲಿಕನ್ ಅಭ್ಯರ್ಥಿ ಕೆನ್ ಪಾಕ್ಸ್ಟನ್ಗೆ ಈ ಫಲಿತಾಂಶ ಹಿನ್ನಡೆಯಾಗಿದೆ.
ಬಳಕೆದಾರರು ಪ್ರಶ್ನಿಸಿದಾಗ ಮಸ್ಕ್ ಅವರದೇ ಎಐ ಚಾಟ್ಬಾಟ್ ಗ್ರೋಕ್ ಕೂಡ ಪೋಸ್ಟ್ ಅಳಿಸಿರುವುದನ್ನು ದೃಢಪಡಿಸಿದೆ. ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾದ ಬಳಿಕ ಮಸ್ಕ್ ತಮ್ಮ ‘Vote red today!’ ಪೋಸ್ಟ್ ತೆಗೆದುಹಾಕಿದ್ದಾರೆ ಎಂದು ಗ್ರೋಕ್ ಉತ್ತರಿಸಿದೆ. ಆದರೆ, ಮಸ್ಕ್ ಈ ಪೋಸ್ಟ್ಗಳನ್ನು ಅಳಿಸಿರುವುದಕ್ಕೆ ಅಧಿಕೃತ ಕಾರಣ ನೀಡಿಲ್ಲ.
ಚುನಾವಣಾ ಪ್ರಚಾರಕ್ಕೆ ₹4,400 ಕೋಟಿ ಖರ್ಚು!
ಫೆಡರಲ್ ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ, ಈ ಚುನಾವಣಾ ಅವಧಿಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಗಳು ಮತ್ತು ಸಂಪ್ರದಾಯವಾದಿ ಗುಂಪುಗಳನ್ನು ಬೆಂಬಲಿಸಲು ಮಸ್ಕ್ ಸುಮಾರು 458 ಮಿಲಿಯನ್ ಡಾಲರ್, ಅಂದರೆ 4,400 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಕಾಂಗ್ರೆಸ್ನಲ್ಲಿ ರಿಪಬ್ಲಿಕನ್ ಪಕ್ಷದ ಹಿಡಿತ ಉಳಿಸಿಕೊಳ್ಳಲು ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಭಾರಿ ಮೊತ್ತವನ್ನು ಹೂಡಿಕೆ ಮಾಡಿದ್ದರು.
ಈ ಪೈಕಿ ಟೆಕ್ಸಾಸ್ ಸೆನೆಟ್ ಚುನಾವಣೆ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಿಗೆ ಹಣ ಹರಿಸಿದ್ದಾರೆ. ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಅಯೋವಾದ ಹೌಸ್ ಕ್ಷೇತ್ರಗಳಲ್ಲಿಯೂ ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದರು. ಸುಮಾರು 216 ಮಿಲಿಯನ್ ಡಾಲರ್ ಹಣವನ್ನು ತಮ್ಮದೇ ‘ಅಮೆರಿಕ ಪಿಎಸಿ’ಗೆ ನೀಡಿದ್ದು, ಮತದಾರರ ಸಂಪರ್ಕ, ಪ್ರಚಾರ ಕಾರ್ಯಕರ್ತರು ಮತ್ತು ಡಿಜಿಟಲ್ ಜಾಹೀರಾತುಗಳಿಗೆ ಬಳಸಲಾಗಿದೆ ಎಂದು ವರದಿಯಾಗಿದೆ.
ಒಂದೇ ದಿನದಲ್ಲಿ ₹2 ಲಕ್ಷ ಕೋಟಿಗೂ ಅಧಿಕ ಸಂಪತ್ತಿನ ಕುಸಿತ!
ಚುನಾವಣಾ ಫಲಿತಾಂಶದ ಬಳಿಕ ಮಸ್ಕ್ ಅವರ ಸಂಪತ್ತಿನ ಮೇಲೂ ಪರಿಣಾಮ ಬೀರಿದೆ. ಬುಧವಾರ ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಷೇರುಗಳ ಮೌಲ್ಯ ಕುಸಿತದಿಂದ ಒಂದೇ ದಿನದಲ್ಲಿ ಅವರ ನಿವ್ವಳ ಸಂಪತ್ತು 23.7 ಬಿಲಿಯನ್ ಡಾಲರ್ ಕಡಿಮೆಯಾಗಿದೆ.
ಡೆಮಾಕ್ರಟಿಕ್ ಪಕ್ಷ ಕಾಂಗ್ರೆಸ್ನಲ್ಲಿ ಪ್ರಾಬಲ್ಯ ಸಾಧಿಸಿದರೆ ಡೇಟಾ ಸೆಂಟರ್ಗಳ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಅನುಮೋದನೆ ಪ್ರಕ್ರಿಯೆಗಳಲ್ಲಿ ಬದಲಾವಣೆ ಆಗಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಮೂಡಿದೆ. ಇದೂ ಷೇರುಗಳ ಕುಸಿತಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಒಟ್ಟಾರೆ, ಚುನಾವಣಾ ಫಲಿತಾಂಶದ ನಂತರ ಮಸ್ಕ್ ಅವರ ರಾಜಕೀಯ ಹೂಡಿಕೆ ಮತ್ತು ಉದ್ಯಮದ ಮೌಲ್ಯ ಎರಡೂ ಚರ್ಚೆಗೆ ಗ್ರಾಸವಾಗಿವೆ.




