*“ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು, ದೇಹವನ್ನು ಗರಗಸದಿಂದ ತುಂಡು ಮಾಡಿದೆ”*: *ನ್ಯಾಯಾಲಯದಲ್ಲಿ ಪತಿಯ ಸ್ಫೋಟಕ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ಪತ್ನಿ ಸಾವಿನ ಪ್ರಕರಣದಲ್ಲಿ ಕೊಲೆ ಆರೋಪ ಎದುರಿಸುತ್ತಿರುವ ಭಾರತ ಮೂಲದ ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ ಆಘಾತ ಮೂಡಿಸಿದೆ. ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಹೇಳಿರುವ ಪತಿ, ಬಳಿಕ ಮೃತದೇಹವನ್ನು ಗರಗಸದಿಂದ ತುಂಡು ಮಾಡಲು ಪ್ರಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಮೃತದೇಹವನ್ನು ಕಸದ ಚೀಲಗಳಲ್ಲಿ ಹಾಕಿ ವಿವಿಧೆಡೆ ಎಸೆದಿರುವುದಾಗಿಯೂ ಹೇಳಿದ್ದಾನೆ. ಆದರೆ, ಪತ್ನಿಯ ಸಾವಿಗೆ ತಾನು ಕಾರಣ ಎಂಬ ಆರೋಪವನ್ನು ನಿರಾಕರಿಸಿದ್ದಾನೆ.
ಅಮೆರಿಕದ ವರ್ಜೀನಿಯಾದಲ್ಲಿ ಈ ಘಟನೆ ನಡೆದಿದೆ. ಆರೋಪಿ ನರೇಶ್ ಭಟ್ ಪತ್ನಿ ಮಮತಾ ಸಾವಿನ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿದ್ದಾರೆ. 2024ರ ಜುಲೈ 29ರ ರಾತ್ರಿ ಮಮತಾ ತಮ್ಮ ಮಗಳೊಂದಿಗೆ ಮಲಗಲು ಹೋಗಿದ್ದರು. ಮರುದಿನ ಬೆಳಗಿನ ಜಾವ ಸುಮಾರು 4 ಗಂಟೆಗೆ ಎಚ್ಚರವಾದಾಗ ಪತ್ನಿ ಹಾಸಿಗೆಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾಗಿ ನರೇಶ್ ಹೇಳಿದ್ದಾರೆ. ಆಕೆಯ ಸುತ್ತ ವಾಂತಿ, ಮಾತ್ರೆಗಳು ಮತ್ತು ಸೆಲ್ಫೋಸ್ ವಿಷದ ಪ್ಯಾಕೆಟ್ ಇತ್ತು ಎಂದು ತಿಳಿಸಿದ್ದಾರೆ.
ಪತ್ನಿಯನ್ನು ಬದುಕಿಸಲು ಸುಮಾರು ಒಂದು ಗಂಟೆ ಸಿಪಿಆರ್ ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡಿದ್ದಾಗಿ ನರೇಶ್ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಆದರೆ, ಆಕೆ ಮೃತಪಟ್ಟಿರುವುದು ಖಚಿತವಾದ ಬಳಿಕ ಪೊಲೀಸರಿಗೆ ಕರೆ ಮಾಡದೆ ಮೃತದೇಹವನ್ನು ಹೇಗೆ ವಿಲೇವಾರಿ ಮಾಡಬೇಕು ಎಂದು ಯೋಚಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಆರಂಭದಲ್ಲಿ ಪೊಟೊಮ್ಯಾಕ್ ನದಿಗೆ ಮೃತದೇಹ ಎಸೆಯುವ ಆಲೋಚನೆ ಬಂದಿತ್ತು ಎಂದೂ ತಿಳಿಸಿದ್ದಾರೆ.
ಮೃತದೇಹವನ್ನು ಕಸದ ಬುಟ್ಟಿಯಲ್ಲಿ ಹಾಕಲು ಪ್ರಯತ್ನಿಸಿದಾಗ ಅದು ಒಳಗೆ ಸೇರಲಿಲ್ಲ. ಹೀಗಾಗಿ ಗರಗಸ ಬಳಸಿ ಕಾಲುಗಳನ್ನು ಬೇರ್ಪಡಿಸಲು ಯತ್ನಿಸಿದ್ದಾಗಿ ನರೇಶ್ ಹೇಳಿದ್ದಾರೆ. ಆದರೆ, ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಧ್ಯವಾಗದ ಕಾರಣ ಪ್ರಯತ್ನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ಕಸದ ಚೀಲಗಳಲ್ಲಿ ಹಾಕಿ ವಿವಿಧ ಸ್ಥಳಗಳ ಕಸದ ಕಂಟೇನರ್ಗಳಿಗೆ ಎಸೆದಿರುವುದಾಗಿ ತನಿಖಾ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಮಮತಾ 2024ರ ಜುಲೈ 29ರಂದು ಕೊನೆಯ ಬಾರಿಗೆ ವಿಡಿಯೋ ಕಾಲ್ನಲ್ಲಿ ಕಾಣಿಸಿಕೊಂಡಿದ್ದರು. ಆಗಸ್ಟ್ 1ರಂದು ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗಸ್ಟ್ 5ರಂದು ನರೇಶ್ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀಸರಿಗೆ ದಂಪತಿಯ ಮನೆಯ ಮಲಗುವ ಕೋಣೆ ಮತ್ತು ಸ್ನಾನಗೃಹದಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಕೂದಲಿನ ತುಣುಕುಗಳು ಹಾಗೂ ರಕ್ತದ ಗುರುತುಗಳಿದ್ದ ಗರಗಸವನ್ನೂ ವಶಪಡಿಸಿಕೊಳ್ಳಲಾಗಿತ್ತು. 2024ರ ಆಗಸ್ಟ್ 22ರಂದು ನರೇಶ್ನನ್ನು ಬಂಧಿಸಲಾಗಿತ್ತು.
ನರೇಶ್ ಪತ್ನಿಯನ್ನು ಕೊಂದು, ಬಳಿಕ ಮೃತದೇಹವನ್ನು ತುಂಡು ಮಾಡಿ ವಿವಿಧ ಕಸದ ಕಂಟೇನರ್ಗಳಲ್ಲಿ ಎಸೆದಿದ್ದಾರೆ ಎಂಬುದು ಪ್ರಾಸಿಕ್ಯೂಷನ್ ಆರೋಪ. ಮನೆಯಲ್ಲಿದ್ದ ರಕ್ತದ ಮಾದರಿಗಳು, ಗರಗಸದಲ್ಲಿದ್ದ ರಕ್ತದ ಗುರುತುಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಸಾಕ್ಷ್ಯವಾಗಿ ಮಂಡಿಸಲಾಗಿದೆ. ಕಸದ ಚೀಲಗಳನ್ನು ವಿವಿಧ ಕಂಟೇನರ್ಗಳಿಗೆ ಎಸೆಯುತ್ತಿರುವ ದೃಶ್ಯಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮಮತಾ ಅವರ ಸಹೋದರ ಕೂಡ ಸಾಕ್ಷ್ಯ ನೀಡಿದ್ದಾರೆ.
ನರೇಶ್ ವಿರುದ್ಧ ಫಸ್ಟ್ ಡಿಗ್ರಿ ಮರ್ಡರ್, ಮೃತದೇಹವನ್ನು ಮರೆಮಾಚುವುದು ಮತ್ತು ಮೃತದೇಹವನ್ನು ಅಪವಿತ್ರಗೊಳಿಸುವುದು ಸೇರಿದಂತೆ ಮೂರು ಪ್ರಮುಖ ಆರೋಪಗಳಿವೆ. ಈ ಆರೋಪಗಳಿಗೆ ತಪ್ಪಿತಸ್ಥನಲ್ಲ ಎಂದು ನರೇಶ್ ಹೇಳಿಕೊಂಡಿದ್ದಾನೆ. ಸದ್ಯ ಪ್ರಕರಣ ವಿಚಾರಣೆ ಮುಂದುವರೆದಿದೆ.



