*ಅನಸ್ತೇಶಿಯಾ ಬಳಿಕ ಒಂದೂವರೆ ವರ್ಷದ ಮಗುವಿನ ಸ್ಥಿತಿ ಗಂಭೀರ*: *ಕ್ಲೌಡ್ ನೈನ್ಗೆ ಕುಮಾರಸ್ವಾಮಿ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಒಂದೂವರೆ ವರ್ಷದ ಮಗುವಿಗೆ ಅನಸ್ತೇಶಿಯಾ ನೀಡಿದ ಬಳಿಕ ಮಗು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಳೆದ ಮೂರೂವರೆ ತಿಂಗಳಿಂದ ಮಗು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದೆ. ಆದರೆ ಮಗುವಿನ ಸ್ಥಿತಿಗೆ ಸಂಬಂಧಿಸಿದಂತೆ ಆಸ್ಪತ್ರೆ ಆಡಳಿತ ಮಂಡಳಿ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಗುವಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿರುವ ಸಚಿವರು, ಇಲ್ಲವಾದರೆ ಸರ್ಕಾರವೇ ಚಿಕಿತ್ಸೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕಟ್ಟೆದೊಡ್ಡಿ ಗ್ರಾಮದ ಸಂಪತ್ ಎಂಬವರ ಒಂದೂವರೆ ವರ್ಷದ ಮಗು ಶಮನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಗರಭಾವಿಯ ಕ್ಲೌಡ್ ನೈನ್ ಆಸ್ಪತ್ರೆಗೆ ದಾಖಲಾಗಿತ್ತು. ಆಟವಾಡುತ್ತಿದ್ದಾಗ ಕಿವಿಗೆ ತಗುಲಿ ಮಗುವಿನ ಕಿವಿ ಗಾಯವಾಗಿತ್ತು. ಕಿವಿಗೆ ಹುಲಿಗೆ ಹಾಕಬೇಕು ಎಂದ ಡಾಕ್ಟರ್ ಅನಸ್ತೇಶಿಯಾ ನೀಡಿದ್ದಾರೆ. ಆದ್ರೆ ಅನಸ್ತೇಶಿಯಾ ನೀಡಿದ ಬಳಿಕ ಮಗು ಕೋಮಾಗೆ ಹೋಗಿದೆ. ಸದ್ಯ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಲಾಗಿದೆ ಎಂದೂ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮಗುವಿನ ತಂದೆ-ತಾಯಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೋಷಕರು ಆಸ್ಪತ್ರೆಯ ಹೊರಗೆ ರಸ್ತೆಯಲ್ಲೇ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಆರೋಗ್ಯ ಸಚಿವರು ಇಂತಹ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಡಬೇಕು. ಚಿಕಿತ್ಸೆ ಹೆಸರಿನಲ್ಲಿ ದುಬಾರಿ ಶುಲ್ಕ ವಸೂಲಿ ಮಾಡುವ ಆಸ್ಪತ್ರೆಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಗುವಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಆಸ್ಪತ್ರೆ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಇಲ್ಲವಾದರೆ ಸರ್ಕಾರ ಮಧ್ಯಪ್ರವೇಶಿಸಿ ಚಿಕಿತ್ಸೆಯ ಹೊಣೆ ಹೊರಬೇಕು ಎಂದು ಒತ್ತಾಯಿಸಿದ್ದಾರೆ. ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ತಾನೇ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ ಎಂದು ಆಸ್ಪತ್ರೆ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.



