
ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಇತ್ತೀಚೆಗೆ ಸಾಲು ಸಾಲು ಅಕ್ರಮಗಳು ಬೆಳಕಿಗೆ ಬರುತ್ತಿವೆ. ಇದೀಗ ಆನೆ ಕಾವಾಡಿಗಳ ಹುದ್ದೆಗಳ ನೇಮಕಾತಿಯಲ್ಲೂ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಆನೆಗಳ ಜೊತೆ ಒಡನಾಟವಿಲ್ಲದ, ನಕಲಿ ದಾಖಲೆ ನೀಡಿದವರಿಗೆ, ವಯೋಮಿತಿ ಮೀರಿದವರಿಗೂ ಹುದ್ದೆ ನೀಡಲಾಗಿದೆ. ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆಯ್ಕೆ ಪ್ರಾಧಿಕಾರದಿಂದ ಇತ್ತೀಚೆಗೆ ಮೈಸೂರು ವೃತ್ತದ 26 ಹುದ್ದೆಗಳಿಗೆ ಕಾವಾಡಿಗಳ ನೇಮಕಾತಿಗೆ ನೇರ ಸಂದರ್ಶನ ನಡೆದಿತ್ತು. ಇದೇ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 1 ರಂದು ಮೈಸೂರಿನಲ್ಲೇ ನಡೆದಿದ್ದ ನೇರ ಸಂದರ್ಶನದಲ್ಲಿ 26 ಕಾವಾಡಿಗರನ್ನ ಆಯ್ಕೆ ಮಾಡಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಅರಣ್ಯ ಇಲಾಖೆ ಪ್ರಕಟಿಸಿತ್ತು. ಇಲ್ಲಿ ಆಯ್ಕೆಯಾಗಿರುವ 26 ಅಭ್ಯರ್ಥಿಗಳಲ್ಲಿ ಹಲವು ಅನರ್ಹರಿಗೆ ಹುದ್ದೆಗಳನ್ನು ನೀಡಲಾಗಿದೆ ಎನ್ನಲಾಗಿದೆ.
ಕಾವಾಡಿಗಳ ಹುದ್ದೆಗೆ ಆನೆಗಳ ಜೊತೆ ಒಡನಾಟವಿರುವುದು ಕಡ್ಡಾಯ. ಆದರೆ ಆಯ್ಕೆಯಾದವರಲ್ಲಿ ಆನೆಗಳ ಬಗ್ಗೆ ಪರಿಚಯವೂ ಇಲ್ಲದವರನ್ನು ಆಯ್ಕೆ ಮಾಡಲಾಗಿದೆ. ಕಾವಾಡಿ ಹುದ್ದೆಗೆ ಆಯ್ಕೆಯಾಗಲು ಅಭ್ಯರ್ಥಿಗಳು ಅರಣ್ಯದಂಚಿನಲ್ಲಿ ವಾಸ ಇರುವ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಅಭ್ಯರ್ಥಿಗಳು ಅರಣ್ಯದಂಚಿನಲ್ಲೇ ವಾಸ ಇದ್ದಾರೆ ಎಂಬುದಕ್ಕೆ ಸ್ಥಳೀಯ ಗ್ರಾಮ ಲೆಕ್ಕಿಗ ಮತ್ತು ರೆವಿನ್ಯು ಇನ್ಸ್ಪೆಕ್ಟರ್ ಪರಿಶೀಲನೆ ಮಾಡಿ ತಹಶೀಲ್ದಾರ್ಗೆ ವರದಿ ನೀಡಬೇಕು. ಇದನ್ನ ಆಧರಿಸಿ ತಹಶೀಲ್ದಾರ್, ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಆದರೆ ಆಯ್ಕೆಯಾಗಿರುವ ಬಹಳಷ್ಟು ಅಭ್ಯರ್ಥಿಗಳು ಪಟ್ಟಣ ಪ್ರದೇಶದಲ್ಲಿ ವಾಸವಿರುವ ಬಗ್ಗೆ ಅಧಿಕೃತ ದಾಖಲೆಗಳಿವೆ.
ಕಾವಾಡಿಗಳ ನೇಮಕಾತಿಗೆ ಏಳು ವಿಭಾಗಗಳಲ್ಲಿ ಅರ್ಜಿ ಕರೆಯಲಾಗಿದ್ದು, ವಿವಿಧ ವಯೋಮಾನ ನಿಗದಿ ಮಾಡಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ನಿಗದಿ ಮಾಡಲಾಗಿದೆ. ಆಯ್ಕೆಯಾಗಿರುವ ಕೆಲ ಅಭ್ಯರ್ಥಿಗಳ ವಯಸ್ಸು 36, 38 ಮತ್ತು 40 ವರ್ಷ ಇರುವುದು ಹಲವು ಅನುಮಾನಗಳನ್ನ ಸೃಷ್ಟಿಸಿದೆ.
ಅರ್ಹರನ್ನ ಕೈಬಿಟ್ಟು, ಕೆಲ ಅರಣ್ಯಾಧಿಕಾರಿಗಳ ಚಾಲಕರ ಮಕ್ಕಳು, ಪಶುವೈದ್ಯರ ಚಾಲಕರ ಮಕ್ಕಳು, ಅರಣ್ಯ ಭವನದಲ್ಲಿ ಕೆಲಸ ಮಾಡುವ ತಮ್ಮ ಆಪ್ತರಿಗೆ ಹುದ್ದೆ ನೀಡಿರುವ ಆರೋಪ ಕೇಳಿಬಂದಿದೆ. ನೇಮಕಾತಿ ಪಟ್ಟಿಯನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ. ಅಲ್ಲದೇ ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲು ಸಂಘಟನೆಗಳು ಮುಂದಾಗಿವೆ.




