*ಕರ್ನಾಟಕದ ಹೋಟೆಲ್‌ಗೆ 8 ಸಾವಿರ ರೂ. ದಂಡ*: *ತಿಂಡಿಯಲ್ಲಿದ್ದ ಕೂದಲಿನಿಂದ ಗ್ರಾಹಕನಿಗೆ ಸಿಕ್ತು ನ್ಯಾಯ*

ಪ್ರಗತಿವಾಹಿನಿ ಸುದ್ದಿ: ಹೋಟೆಲ್‌ನಲ್ಲಿ ತಿಂಡಿ ತಿನ್ನುವಾಗ ಆಹಾರದಲ್ಲಿ ಕೂದಲು ಕಂಡುಬಂದರೆ ಸಾಮಾನ್ಯವಾಗಿ ಸಿಬ್ಬಂದಿಯನ್ನು ಪ್ರಶ್ನಿಸಿ ಸುಮ್ಮನಾಗುತ್ತೇವೆ. ಆದರೆ ಇಲ್ಲೊಬ್ಬ ಗ್ರಾಹಕ ಮಾತ್ರ ಸುಮ್ಮನಾಗದೆ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತಿಂಡಿಯಲ್ಲಿ ಕೂದಲು ಪತ್ತೆಯಾದರೂ ಹಣ ಪಾವತಿಸುವಂತೆ ಒತ್ತಾಯಿಸಿದ ಹೋಟೆಲ್‌ಗೆ ಇದೀಗ 8 ಸಾವಿರ ರೂಪಾಯಿ ದಂಡದ ರೂಪದಲ್ಲಿ ಪಾವತಿಸುವಂತೆ ಆದೇಶಿಸಲಾಗಿದೆ. ಆಹಾರದ ಗುಣಮಟ್ಟದ ಜೊತೆಗೆ ಗ್ರಾಹಕರ ಹಕ್ಕುಗಳ ಬಗ್ಗೆಯೂ ಈ ತೀರ್ಪು ಗಮನ ಸೆಳೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕೇರಳದ ಕಾಸರಗೋಡು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ. ಕರ್ನಾಟಕದ ಹೋಟೆಲ್ ಒಂದಕ್ಕೆ ಗ್ರಾಹಕನಿಗೆ 5 ಸಾವಿರ ರೂಪಾಯಿ ಪರಿಹಾರ ಹಾಗೂ 3 ಸಾವಿರ ರೂಪಾಯಿ ಕಾನೂನು ಹೋರಾಟದ ವೆಚ್ಚ ಸೇರಿದಂತೆ ಒಟ್ಟು 8 ಸಾವಿರ ರೂಪಾಯಿ ಪಾವತಿಸುವಂತೆ ಆದೇಶಿಸಿದೆ.
2025ರ ಸೆಪ್ಟೆಂಬರ್ 28ರಂದು ದೂರುದಾರರು ಮಂಜೇಶ್ವರದಿಂದ ಮಡಿಕೇರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಸ್ನೇಹಿತನೊಂದಿಗೆ ಹೋಟೆಲ್‌ಗೆ ತೆರಳಿ ಬೆಳಗಿನ ಉಪಾಹಾರಕ್ಕೆ ಸಜ್ಜಿಗೆ ಅವಲಕ್ಕಿ ಆರ್ಡರ್ ಮಾಡಿದ್ದರು. ಆದರೆ ತಿಂಡಿ ತಿನ್ನಲು ಆರಂಭಿಸಿದಾಗ ಅದರೊಳಗೆ ಕೂದಲು ಇರುವುದು ಕಂಡುಬಂದಿದೆ. ತಕ್ಷಣವೇ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ.
ವೇಟರ್ ಕೂಡ ಕೂದಲಿರುವುದನ್ನು ಒಪ್ಪಿಕೊಂಡು ತಟ್ಟೆಯನ್ನು ವಾಪಸ್ ತೆಗೆದುಕೊಂಡಿದ್ದಾನೆ. ಆದರೆ ತಿಂಡಿಯ ಹಣ ಪಾವತಿಸುವ ಅಗತ್ಯವಿಲ್ಲ ಎಂದು ಹೇಳುವ ಬದಲು, ಬಿಲ್ ಕಟ್ಟುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಇತರ ಗ್ರಾಹಕರ ಎದುರೇ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಕಲುಷಿತ ಆಹಾರ ಸೇವಿಸದಿದ್ದರೂ 180 ರೂಪಾಯಿ ಬಿಲ್ ಪಾವತಿಸಬೇಕಾಯಿತು. ಇದರಿಂದ ಮಾನಸಿಕ ಹಿಂಸೆ ಮತ್ತು ಅವಮಾನ ಅನುಭವಿಸಿದ್ದ ಗ್ರಾಹಕರು ಹೋಟೆಲ್‌ಗೆ ಕಾನೂನು ನೋಟಿಸ್ ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹೋಟೆಲ್ ಸಿಬ್ಬಂದಿಯ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿತ್ತು. ಆಹಾರದ ಹಣ ಹಿಂದಿರುಗಿಸುವುದಾಗಿಯೂ ತಿಳಿಸಿತ್ತು.
ಆದರೆ ಗ್ರಾಹಕ ಆಯೋಗದಿಂದ ನೋಟಿಸ್ ಜಾರಿಯಾದ ಬಳಿಕವೂ ಹೋಟೆಲ್ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಆಯೋಗ ಏಕಪಕ್ಷೀಯವಾಗಿ ವಿಚಾರಣೆ ಮುಂದುವರಿಸಿತು. ಆಹಾರದಲ್ಲಿದ್ದ ಕೂದಲಿನ ಫೋಟೋಗಳು, ಪಾವತಿ ರಸೀದಿ, ಹೋಟೆಲ್ ಬಿಲ್ ಮತ್ತು ಹೋಟೆಲ್ ನೀಡಿದ್ದ ಪ್ರತಿಕ್ರಿಯೆಗಳನ್ನು ಪರಿಶೀಲಿಸಿತು.
ಗ್ರಾಹಕರು 25 ಸಾವಿರ ರೂಪಾಯಿ ಪರಿಹಾರ ಹಾಗೂ 3 ಸಾವಿರ ರೂಪಾಯಿ ಕಾನೂನು ವೆಚ್ಚಕ್ಕೆ ಮನವಿ ಮಾಡಿದ್ದರು. ಆದರೆ ಪ್ರಕರಣದ ಸನ್ನಿವೇಶಗಳನ್ನು ಪರಿಗಣಿಸಿದ ಆಯೋಗ 5 ಸಾವಿರ ರೂಪಾಯಿ ಪರಿಹಾರ ಮತ್ತು 3 ಸಾವಿರ ರೂಪಾಯಿ ಕಾನೂನು ವೆಚ್ಚ ಪಾವತಿಸುವಂತೆ ಆದೇಶಿಸಿದೆ. ಆದೇಶದ ಪ್ರತಿ ಸ್ವೀಕರಿಸಿದ 30 ದಿನಗಳೊಳಗೆ ಒಟ್ಟು 8 ಸಾವಿರ ರೂಪಾಯಿ ಪಾವತಿಸಬೇಕು ಎಂದು ಸೂಚಿಸಿದೆ.



