Kannada NewsKarnataka NewsLatestPolitics

*“ನನ್ನ ಎದೆಯ ಮೇಲೆಯೇ ಬುಲ್ಡೋಜರ್ ಚಲಾಯಿಸಿ ನೋಡಿ”*: *ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು*

ಪ್ರಗತಿವಾಹಿನಿ ಸುದ್ದಿ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಇದೀಗ ಬುಲ್ಡೋಜರ್ ಸವಾಲು ಭಾರಿ ಚರ್ಚೆಗೆ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ದಾಳಿ ಮತ್ತು ಕಲ್ಲು ತೂರಾಟ ನಡೆದ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಧೈರ್ಯವಿದ್ದರೆ ನನ್ನ ಮೇಲೆಯೇ ಬುಲ್ಡೋಜರ್ ಚಲಾಯಿಸಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ತಮ್ಮ ಪಕ್ಷದ ನಾಯಕರನ್ನು ಬೆದರಿಸಲು ಇಂತಹ ತಂತ್ರಗಳು ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ನಿವಾಸದ ಹೊರಭಾಗದಲ್ಲಿ ದಾಳಿ ನಡೆದ ಬಳಿಕ ಅವರು ಧರಣಿ ಆರಂಭಿಸಿದ್ದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ, ಬಿಜೆಪಿಗೆ ನೇರ ಸವಾಲು ಹಾಕಿದರು. “ನಿಮ್ಮ ಬಳಿ ಎಷ್ಟು ಬುಲ್ಡೋಜರ್‌ಗಳಿವೆ? ಬನ್ನಿ, ನಮ್ಮ ದೇಹದ ಮೇಲೆಯೇ ಅವುಗಳನ್ನು ಚಲಾಯಿಸಿ. ನಿಮಗೆ ನಿಜವಾಗಿಯೂ ಧೈರ್ಯವಿದ್ದರೆ ಮೊದಲು ನನ್ನ ಎದೆಯ ಮೇಲೆಯೇ ಬುಲ್ಡೋಜರ್ ಚಲಾಯಿಸಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಳೀಘಾಟ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯ ವರ್ತನೆಯನ್ನೂ ಮಮತಾ ಖಂಡಿಸಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಯಾರೂ ಕಾನೂನಿನ ಗೆರೆ ದಾಟಬಾರದು. ಪೊಲೀಸರು ಮಿತಿ ಮೀರಿದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಬೆಂಬಲಿಗರು ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ಕಲ್ಲು ತೂರಾಟಕ್ಕೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಘಟನೆಯ ಬೆನ್ನಲ್ಲೇ ಅಭಿಷೇಕ್ ನಿವಾಸದ ಹೊರಗಿನ ರಸ್ತೆಯಲ್ಲಿ ಎರಡು ತಿಂಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇನ್ನು ಬಿಜೆಪಿ ಕಾರ್ಯಕರ್ತರು ಮೊಳೆಗಳನ್ನು ಜೋಡಿಸಿದ್ದ ಕೋಲುಗಳಿಂದ ಹಲ್ಲೆ ನಡೆಸಿ, ತಮ್ಮ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ. ದಾಳಿಯ ಸಾಧ್ಯತೆ ಕುರಿತು ಎರಡು ದಿನಗಳ ಹಿಂದೆಯೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಿ ಆತಂಕ ವ್ಯಕ್ತಪಡಿಸಿದ್ದಾಗಿಯೂ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿಯಿಡೀ ಧರಣಿ ನಡೆಸಿದ ಅಭಿಷೇಕ್, ಶನಿವಾರ ಬೆಳಗ್ಗೆ ಪೊಲೀಸರ ಮಧ್ಯಸ್ಥಿಕೆಯ ಬಳಿಕ ಮನೆಗೆ ತೆರಳಿದ್ದಾರೆ. ಈ ಘಟನೆಯಿಂದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

Related Articles

Back to top button