Belagavi NewsBelgaum NewsKannada NewsKarnataka News

*ಬೆಳಗಾವಿ ಒಪ್ಪಂದ ನಮಗೆ ಸಂಬಂಧವಿಲ್ಲ*: *ಮತ್ತೆ ಭುಗಿಲ್ಲೆದ್ದ ರೈತರ ಹೋರಾಟ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತಾತ್ಕಾಲಿಕ ಅಂತ್ಯಗೊಂಡ ಬೆನ್ನಲ್ಲೇ ಇದೀಗ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬು ಬೆಲೆ ಹೋರಾಟ ಮತ್ತೆ ಕಾವು ಪಡೆದುಕೊಂಡಿದೆ. 

ಪ್ರತಿ ಟನ್ ಕಬ್ಬಿಗೆ ₹4,250 ದರ ನೀಡಬೇಕೆಂದು ಆಗ್ರಹಿಸಿ ರೈತರು ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.

₹4,250 ದರ ಘೋಷಣೆಯಾಗುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಬೆಳಗಾವಿ ಜಿಲ್ಲೆಯಲ್ಲಿ ನಡೆದ ಒಪ್ಪಂದಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಬ್ಬಿನ ಬೆಲೆ ನಿಗದಿ ಕೇವಲ ಒಂದು ಜಿಲ್ಲೆಗೆ ಸೀಮಿತವಾದ ವಿಚಾರವಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜಿಲ್ಲಾಧಿಕಾರಿಗಳು ನೀಡುವ ಆದೇಶ ರಾಜ್ಯಾದ್ಯಂತ ಅನ್ವಯವಾಗುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ರಾಜ್ಯದ ಎಲ್ಲ ಕಬ್ಬು ಬೆಳೆಗಾರರಿಗೆ ಅನ್ವಯವಾಗುವಂತೆ ಅಧಿಕೃತ ಆದೇಶ ಹೊರಡಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ಇನ್ನು ಕಳೆದ ವರ್ಷ ಭರವಸೆ ನೀಡಿದ್ದ ಪ್ರತಿ ಟನ್‌ಗೆ ₹300 ಹೆಚ್ಚುವರಿ ಹಣವನ್ನು ಈವರೆಗೂ ಪಾವತಿಸಿಲ್ಲ. ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಒಪ್ಪಂದದಲ್ಲಿ ಹಲವು ಲೋಪಗಳಿವೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರೈತ ಮುಖಂಡರು, ಎಸ್‌ಎಪಿ, ಎಫ್‌ಆರ್‌ಪಿ ಹಾಗೂ ಎಂಎಸ್‌ಪಿ ದರಗಳ ಕುರಿತ ಕಾನೂನು ನಿಯಮಗಳ ಅರಿವು ತಮಗಿದೆ. ಸರ್ಕಾರ ರೈತರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ 15 ವರ್ಷಗಳಿಂದಲೂ ಕಬ್ಬಿಗೆ ನ್ಯಾಯಯುತ ಬೆಲೆ ಸಿಗಬೇಕೆಂದು ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ, ಪ್ರತಿ ಬಾರಿಯೂ ರೈತರ ಹೋರಾಟ ರಾಜಕೀಯ ದಾಳವಾಗಿ ಬಳಕೆಯಾಗುತ್ತಿದ್ದು, ಅಂತಿಮವಾಗಿ ರೈತರ ಬೇಡಿಕೆಗಳು ಈಡೇರದೆ ಹೋರಾಟಗಳು ವ್ಯರ್ಥವಾಗುತ್ತಿವೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಒಟ್ಟಾರೆ, ಬೆಳಗಾವಿಯಲ್ಲಿ ಹೋರಾಟಕ್ಕೆ ತಾತ್ಕಾಲಿಕ ತೆರೆ ಬಿದ್ದ ಬೆನ್ನಲ್ಲೇ ಮುಧೋಳದಲ್ಲಿ ಕಬ್ಬಿನ ಬೆಲೆ ಸಮರ ಆರಂಭವಾಗಿದ್ದು, ₹4,250 ದರದ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.

Related Articles

Back to top button