Film & EntertainmentKannada NewsKarnataka NewsLatest

*ಮಗನ ಮೊದಲ ಸಿನಿಮಾದಿಂದ ನಿರ್ದೇಶಕ ಔಟ್*: *ಕೊನೆಗೂ ಮೌನ ಮುರಿದ ಪ್ರಿಯಾಂಕಾ ಉಪೇಂದ್ರ*

ಪ್ರಗತಿವಾಹಿನಿ ಸುದ್ದಿ: ನಟ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ಅವರ ಚೊಚ್ಚಲ ಸಿನಿಮಾದ ನಿರ್ದೇಶಕರ ಬದಲಾವಣೆ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದದ ಬಗ್ಗೆ ನಟಿ ಪ್ರಿಯಾಂಕಾ ಉಪೇಂದ್ರ ಕೊನೆಗೂ ಮೌನ ಮುರಿದಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ನಿರ್ದೇಶಕರ ಬದಲಾವಣೆಗೆ ಕಾರಣವೇನು?

ತಮ್ಮ ಮಗ ಆಯುಷ್ ಅವರ ವೃತ್ತಿಜೀವನದ ಮೊದಲ ಸಿನಿಮಾವನ್ನು ರಕ್ಷಿಸುವುದು ಮತ್ತು ನಿರ್ಮಾಪಕರ ಹಣಕ್ಕೆ ನಷ್ಟವಾಗದಂತೆ ನೋಡಿಕೊಳ್ಳುವುದು ತಮ್ಮ ಮುಖ್ಯ ಉದ್ದೇಶ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

ಸಿನಿಮಾದ ಗುಣಮಟ್ಟ ಕಾಪಾಡುವುದರ ಜೊತೆಗೆ ನಾಯಕನ ಭವಿಷ್ಯದ ಹಿತದೃಷ್ಟಿಯಿಂದ ನಿರ್ದೇಶಕರನ್ನು ಬದಲಾಯಿಸುವ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಯಿತು ಎಂದು ಪ್ರಿಯಾಂಕ ಪತ್ರದಲ್ಲಿ ವಿವರಿಸಿದ್ದಾರೆ.

ಚಿತ್ರೀಕರಣ ಆರಂಭವಾದ ದಿನದಿಂದಲೂ ನಿರ್ಮಾಣ ತಂಡಕ್ಕೆ ಅಗತ್ಯವಾದ ಹಣಕಾಸು, ಸೃಜನಶೀಲತೆ ಮತ್ತು ಲಾಜಿಸ್ಟಿಕ್ಸ್ ವಿಚಾರಗಳಲ್ಲಿ ಸಂಪೂರ್ಣ ಬೆಂಬಲ ನೀಡಿರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ. ಆದರೆ ಕೆಲಸದ ವೇಳಾಪಟ್ಟಿ, ಸಮರ್ಪಕ ಸಂವಹನ ಮತ್ತು ಯೋಜನೆಯ ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆಗಳು ಹಾಗೂ ಆತಂಕಗಳು ಎದುರಾಗಿದ್ದವು ಎಂದು ಉಲ್ಲೇಖಿಸಿದ್ದಾರೆ.

ಈ ಗೊಂದಲಗಳಿಗೆ ನ್ಯಾಯಯುತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಸ್ತಕ್ಷೇಪವನ್ನು ಪ್ರಿಯಾಂಕಾ ಕೋರಿದ್ದಾರೆ. ಚೇಂಬರ್ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಸಿನಿಮಾವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ತಾವು ಬದ್ಧರಾಗಿರುವುದಾಗಿಯೂ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ, ಆಯುಷ್ ಉಪೇಂದ್ರ ಅವರ ಮೊದಲ ಸಿನಿಮಾದ ನಿರ್ದೇಶಕರ ಬದಲಾವಣೆ ವಿವಾದಕ್ಕೆ ಪ್ರಿಯಾಂಕಾ ಅವರ ಪತ್ರ ಹೊಸ ತಿರುವು ನೀಡಿದೆ. ಇದೀಗ ಫಿಲ್ಮ್ ಚೇಂಬರ್ ಈ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಮತ್ತು ಮುಂದಿನ ನಿರ್ದೇಶಕರು ಯಾರು ಎಂಬ ಕುತೂಹಲ ಮೂಡಿದೆ.

Related Articles

Back to top button