
ಪ್ರಗತಿವಾಹಿನಿ ಸುದ್ದಿ: ಯೂರೋಪ್ಗೆ ಅಕ್ರಮವಾಗಿ ವಲಸೆ ಹೋಗಲು ಪ್ರಯತ್ನಿಸುತ್ತಿದ್ದವರಿದ್ದ ದೋಣಿಯೊಂದು ಸೆನೆಗಲ್ನ ಸಮುದ್ರ ತೀರದಲ್ಲಿ ಮುಳುಗಿ ಭೀಕರ ದುರಂತ ಸಂಭವಿಸಿದೆ.
ಘಟನೆಯಲ್ಲಿ ಮತ್ತಷ್ಟು ಮೃತದೇಹಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ದೋಣಿಯಲ್ಲಿದ್ದವರ ಪೈಕಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ ಎಂದು ಅಲ್ಲಿನ ತುರ್ತು ಸೇವಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಆಫ್ರಿಕಾದಿಂದ ಸ್ಪೇನ್ನ ಕ್ಯಾನರಿ ದ್ವೀಪಗಳನ್ನು ತಲುಪುವ ಉದ್ದೇಶದಿಂದ ಈ ದೋಣಿಯಲ್ಲಿ ಹಲವರು ಪ್ರಯಾಣಿಸುತ್ತಿದ್ದರು. ಉತ್ತಮ ಜೀವನದ ನಿರೀಕ್ಷೆಯಲ್ಲಿ ಆರ್ಥಿಕ ಸಂಕಷ್ಟ, ಬಡತನ ಮತ್ತು ನಿರುದ್ಯೋಗದಿಂದ ಬೇಸತ್ತ ಯುವಕರು ಅಟ್ಲಾಂಟಿಕ್ ಮಹಾಸಾಗರದ ಮೂಲಕ ಅಪಾಯಕಾರಿ ಸಮುದ್ರಯಾನ ಕೈಗೊಳ್ಳುತ್ತಿದ್ದಾರೆ. ಸುಮಾರು 1,300 ಕಿಲೋಮೀಟರ್ ದೂರದ ಈ ಮಾರ್ಗದಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆಗಳಿಲ್ಲದ ಮರದ ದೋಣಿಗಳು ಹಾಗೂ ಸಣ್ಣ ಹಾಯಿದೋಣಿಗಳಲ್ಲಿ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಇದರಿಂದಾಗಿ ಇಂತಹ ದುರಂತಗಳು ಪದೇಪದೇ ಸಂಭವಿಸುತ್ತಿವೆ.
ಘಟನೆಗೆ ಸಂಬಂಧಿಸಿದಂತೆ ಸೆನೆಗಲ್ ಅಧ್ಯಕ್ಷ ಬಾಸಿರೂ ಡಿಯೋಮಾಯೆ ಫಾಯೆ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಯುವಕರ ಜೀವದೊಂದಿಗೆ ಆಟವಾಡುತ್ತಿರುವ ಮಾನವ ಕಳ್ಳಸಾಗಾಣಿಕೆ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ ಮಹಾನಿರ್ದೇಶಕಿ ಆಮಿ ಪೋಪ್ ಕೂಡ ಈ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಳ್ಳಸಾಗಾಣಿಕೆದಾರರು ಸಮುದ್ರಯಾನಕ್ಕೆ ಯೋಗ್ಯವಲ್ಲದ ದೋಣಿಗಳಲ್ಲಿ ಜನರನ್ನು ಕಳುಹಿಸುತ್ತಿದ್ದು, ಬಡತನ ಮತ್ತು ನಿರುದ್ಯೋಗದಂತಹ ಸಂಕಷ್ಟಗಳನ್ನು ದುರುಪಯೋಗಪಡಿಸಿಕೊಂಡು ಹಣ ಗಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಸೆನೆಗಲ್ ಆಂತರಿಕ ಸಚಿವಾಲಯವು ಅಕ್ರಮ ಮಾನವ ಸಾಗಾಣಿಕೆ ಜಾಲಗಳನ್ನು ನಿಯಂತ್ರಿಸಲು ನೆರೆಯ ರಾಷ್ಟ್ರಗಳೊಂದಿಗೆ ಸಹಕಾರ ಹೆಚ್ಚಿಸುವುದಾಗಿ ತಿಳಿಸಿದೆ. ಕಡಲ ಕಾವಲು ಪಡೆಗಳು ಕಳೆದ ಶುಕ್ರವಾರ ಮತ್ತೊಂದು ದೋಣಿಯನ್ನು ತಡೆದು ಸ್ಪೇನ್ಗೆ ತೆರಳುತ್ತಿದ್ದ 142 ವಲಸಿಗರನ್ನು ರಕ್ಷಿಸಿವೆ. ರಕ್ಷಿಸಲ್ಪಟ್ಟವರಲ್ಲಿ 23 ಮಹಿಳೆಯರು, ಇಬ್ಬರು ಹಸುಗೂಸುಗಳು ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ.
ಸೆನೆಗಲ್ ಮಾತ್ರವಲ್ಲದೆ ಗ್ಯಾಂಬಿಯಾ, ಗಿನಿಯಾ-ಬಿಸೌ, ಗಿನಿಯಾ ಮತ್ತು ನೈಜೀರಿಯಾ ದೇಶಗಳ ಪ್ರಜೆಗಳೂ ಈ ಅಪಾಯಕಾರಿ ವಲಸೆ ಮಾರ್ಗವನ್ನು ಬಳಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಆಫ್ರಿಕಾದಿಂದ ಸ್ಪೇನ್ನ ಕ್ಯಾನರಿ ದ್ವೀಪಗಳ ಮೂಲಕ ಯೂರೋಪ್ ಪ್ರವೇಶಿಸುವ ಮಾರ್ಗವು ವಲಸಿಗರಿಗೆ ಪ್ರಮುಖ ಹಾದಿಯಾಗಿದೆ. ಆದರೆ ಈ ಮಾರ್ಗದಲ್ಲಿ ವಲಸಿಗರ ಸಂಖ್ಯೆ ಹಾಗೂ ಸಮುದ್ರ ದುರಂತಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕ್ಯಾನರಿ ದ್ವೀಪಗಳ ಪ್ರಾದೇಶಿಕ ಸರ್ಕಾರದ ಅಧ್ಯಕ್ಷ ಫರ್ನಾಂಡೊ ಕ್ಲಾವಿಜೋ ಕೂಡ ಪರಿಸ್ಥಿತಿ ನಿಯಂತ್ರಣ ಮೀರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಉತ್ತಮ ಭವಿಷ್ಯದ ಕನಸು ಹೊತ್ತು ಅಪಾಯಕಾರಿ ಸಮುದ್ರಯಾನಕ್ಕೆ ಮುಂದಾಗುತ್ತಿರುವ ಯುವಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲಿ ಮಾನವೀಯ ಕಳವಳಕ್ಕೆ ಕಾರಣವಾಗಿದೆ.



