CrimeKannada NewsKarnataka NewsLatest

*ಪಾದ್ರಿ ವಿರುದ್ಧ ಮತ್ತೊಂದು ಪೋಕ್ಸೋ ಕೇಸ್ ದಾಖಲು*: *ಬಿಷಪ್ ವಿರುದ್ಧವೂ ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಂಗಳೂರಿನ ಚರ್ಚ್ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ ವಿರುದ್ಧ ಮತ್ತೊಂದು ಪೋಕ್ಸೋ ಪ್ರಕರಣ ದಾಖಲಾಗಿದೆ. 14 ವರ್ಷದ ಬಾಲಕನ ಪ್ರಕರಣದ ಬೆನ್ನಲ್ಲೇ ಇದೀಗ 13 ವರ್ಷದ ಬಾಲಕನಿಗೂ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎರಡನೇ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆಯನ್ನು ಕೇಂದ್ರ ಉಪವಿಭಾಗದ ಎಸಿಪಿಗೆ ವಹಿಸಲಾಗಿದೆ.

ಈ ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಮೈಸೂರು ಮೂಲದ ಒಡನಾಡಿ ಸೇವಾ ಸಂಸ್ಥೆ, ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪೌಲ್ ಸಲ್ಡಾನ ವಿರುದ್ಧ ಗಂಭೀರ ಆರೋಪ ಮಾಡಿದೆ. ಪಾದ್ರಿ ವಿರುದ್ಧದ ದೂರುಗಳ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಪೊಲೀಸರಿಗೆ ದೂರು ನೀಡದೆ, ಆಂತರಿಕ ತನಿಖೆಯ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂಬುದು ಸಂಸ್ಥೆಯ ಆರೋಪ.

ಕಳೆದ ಆಗಸ್ಟ್‌ನಲ್ಲಿಯೇ ಐವರು ಬಾಲಕರು ಮತ್ತು ಅವರ ಪೋಷಕರು ಬಿಷಪ್ ಅವರನ್ನು ಭೇಟಿಯಾಗಿ ದೂರು ನೀಡಿದ್ದರು ಎಂದು ಒಡನಾಡಿ ಸಂಸ್ಥೆ ಹೇಳಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪಗಳಿದ್ದರೂ ಪೊಲೀಸರಿಗೆ ಮಾಹಿತಿ ನೀಡದೆ ಚರ್ಚ್ ಮಟ್ಟದಲ್ಲೇ ವಿಚಾರಣೆ ನಡೆಸಲಾಗಿದೆ ಎಂದು ಸಂಸ್ಥೆ ಆಕ್ಷೇಪಿಸಿದೆ.

ಪೋಕ್ಸೋ ಕಾಯಿದೆ 2012ರ ಸೆಕ್ಷನ್ 19 ಮತ್ತು 21ರ ಅಡಿಯಲ್ಲಿ ಮಾಹಿತಿ ನೀಡುವ ಕಡ್ಡಾಯ ಜವಾಬ್ದಾರಿಯನ್ನು ಪಾಲಿಸಿಲ್ಲ ಎಂದು ಆರೋಪಿಸಿರುವ ಸಂಸ್ಥೆ, ಬಿಷಪ್ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ದೂರು ನೀಡಿದೆ.

ಒಡನಾಡಿ ಸಂಸ್ಥೆಯ ಸಂಸ್ಥಾಪಕ ಸ್ಟ್ಯಾನ್ಲಿ ಮಾತನಾಡಿ, ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬವಾಗಿದ್ದರಿಂದಲೇ ಪಾದ್ರಿಗೆ ಜಾಮೀನು ಪಡೆಯಲು ಅನುಕೂಲವಾಗಿದೆ ಎಂದು ಆರೋಪಿಸಿದ್ದಾರೆ. ಬಿಷಪ್ ಮಾತ್ರವಲ್ಲದೆ ವೆಲೆನ್ಸಿಯಾ ಚರ್ಚ್ ಉಪಾಧ್ಯಕ್ಷರು ಹಾಗೂ ಬಿಷಪ್ ಹೌಸ್‌ನ ಪ್ರಮುಖರ ವಿರುದ್ಧವೂ ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು, ಪ್ರಕರಣದಲ್ಲಿ ಇನ್ನೂ ಹಲವು ಮಕ್ಕಳು ಸಂತ್ರಸ್ತರಾಗಿರುವ ಸಾಧ್ಯತೆಯಿದೆ ಎಂಬ ಆತಂಕವನ್ನೂ ಸಂಸ್ಥೆ ವ್ಯಕ್ತಪಡಿಸಿದೆ. ಎಲ್ಲ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಲು ಪ್ರತ್ಯೇಕ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂಬುದು ಒಡನಾಡಿ ಸಂಸ್ಥೆಯ ಪ್ರಮುಖ ಬೇಡಿಕೆಯಾಗಿದೆ.

ಅಂದಹಾಗೆ, ವೆಲೆನ್ಸಿಯಾ ಚರ್ಚ್‌ನ ಪಾದ್ರಿ ಫಾ. ಸಿಪ್ರಿಯನ್ ಪಿಂಟೋ ವಿರುದ್ಧ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಈ ಹಿಂದೆ ಕೇಳಿಬಂದಿತ್ತು. ಪ್ರಾರ್ಥನೆಗೆ ಬರುತ್ತಿದ್ದ ಬಾಲಕರನ್ನು ಆಮಿಷವೊಡ್ಡಿ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಇಬ್ಬರು ಬಾಲಕರು ಪೋಷಕರ ಬಳಿ ಈ ವಿಷಯ ತಿಳಿಸಿದ ಬಳಿಕ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಲೆಮರೆಸಿಕೊಂಡಿದ್ದ ಪಾದ್ರಿಯನ್ನು ಬಂಧಿಸಿದ್ದರು.

ಸದ್ಯ ಎರಡನೇ ಪ್ರಕರಣದ ತನಿಖೆ ಮುಂದುವರಿದಿದ್ದು, ಪಾದ್ರಿ ಹಾಗೂ ಬಿಷಪ್ ವಿರುದ್ಧ ಕೇಳಿಬಂದಿರುವ ಆರೋಪಗಳ ಸತ್ಯಾಸತ್ಯತೆ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯಿಂದ ಸ್ಪಷ್ಟವಾಗಬೇಕಿದೆ.

Related Articles

Back to top button