
ಪ್ರಗತಿವಾಹಿನಿ ಸುದ್ದಿ: ಅಂಗಡಿಯೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಪಟಾಕಿಗಳು ಭೀಕರವಾಗಿ ಸ್ಫೋಟಗೊಂಡ ಪರಿಣಾಮವಾಗಿ 16 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ದೀಪಾವಳಿ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ವಾಣಿಜ್ಯ ಮಳಿಗೆಯೊಂದರಲ್ಲಿ ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು. ಆಕಸ್ಮಿಕವಾಗಿ ಸಂಭವಿಸಿದ ಸ್ಫೋಟದ ತೀವ್ರತೆಗೆ ಕಟ್ಟಡದ ಮೇಲ್ಛಾವಣಿ ಹಾಗೂ ಗೋಡೆಗಳ ಭಾಗ ಕುಸಿದು ಬಿದ್ದಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಅಂಗಡಿಗಳು ಹಾಗೂ ಸಾರ್ವಜನಿಕರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿತ್ತು.
ಮುಂಬೈನ ಮಲಾಡ್ ಪಶ್ಚಿಮ ಪ್ರದೇಶದಲ್ಲಿರುವ ಮಲವಾನಿಯ ಎಂಎಚ್ಬಿ (MHB) ಕಾಲೋನಿ, ಚಾಲ್ ಸಂಖ್ಯೆ 2ರಲ್ಲಿನ ಪಟಾಕಿ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ.
ಘಟನೆಯ ನಂತರ ನಾಪತ್ತೆಯಾಗಿದ್ದ ಬಾಲಕನೊಬ್ಬ, ಅಂಗಡಿಯೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದನು ಎಂದು ನಾಗರಿಕ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತಪಟ್ಟ ಬಾಲಕನನ್ನು ಶಾನವಾಜ್ ನಿಯಾಜ್ ಖಾನ್ ಎಂದು ಗುರುತಿಸಲಾಗಿದ್ದು, ಆತ ಶೇಕಡಾ 100ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿದ್ದನು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.




