*ಖರ್ಗೆ ಹೇಳಿಕೆಗೆ ಬಿಜೆಪಿಯಿಂದ ಎಐ ತಿರುಗೇಟು*: *ಮೋದಿ ಕುರಿತು ವೈರಲ್ ಆಯ್ತು ಹೊಸ ವಿಡಿಯೋ*

ಪ್ರಗತಿವಾಹಿನಿ ಸುದ್ದಿ: “ಮೋದಿ ಜೈಲಿಗೆ ಹೋಗುತ್ತಾರೆ” ಎಂದು ಹೇಳಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ವಿಭಿನ್ನ ರೀತಿಯಲ್ಲಿ ತಿರುಗೇಟು ನೀಡಿದೆ. ಕೃತಕ ಬುದ್ಧಿಮತ್ತೆ (AI) ಬಳಸಿ ಸಿದ್ಧಪಡಿಸಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಜೆಪಿ, ಹಾಡಿನ ಮೂಲಕ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕೌಂಟರ್ ಕೊಟ್ಟಿದೆ.
ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, “ಎಲ್ಲೂ ಹೋಗಲ್ಲ ಮೋದಿ, ಎಲ್ಲೂ ಹೋಗಲ್ಲ, ಜನರನ್ನು ಬಿಟ್ಟು ಎಂದಿಗೂ ಮೋದಿ ಎಲ್ಲೂ ಹೋಗಲ್ಲ” ಎಂಬ ಹಾಡನ್ನು ಬಳಸಲಾಗಿದೆ. ಈ ವಿಡಿಯೋ ಇದೀಗ ರಾಜಕೀಯ ವಲಯದಲ್ಲಿ ಗಮನ ಸೆಳೆಯುತ್ತಿದೆ.
ಖರ್ಗೆ ಹೇಳಿಕೆಯಿಂದ ಶುರುವಾದ ವಿವಾದ
ಬಿಹಾರದ ಮೊದಲ ಮುಖ್ಯಮಂತ್ರಿ ಶ್ರೀಕೃಷ್ಣ ಸಿಂಗ್ ಅವರ 139ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಅಕ್ರಮಗಳ ಕುರಿತು ಮಾತನಾಡಿದ್ದರು. ಈ ವೇಳೆ “ಮೋದಿ ಜೈಲಿಗೆ ಹೋಗುತ್ತಾರೆ” ಎಂದು ಹೇಳಿದ್ದರು.
ಅದೇ ಸಂದರ್ಭದಲ್ಲಿ ಸಭೆಯಲ್ಲಿದ್ದ ಸಂತೋಷ್ ಕುಮಾರ್ ಎಂಬ ವ್ಯಕ್ತಿ “ಮೋದಿ ಕಹೀಂ ನಹೀಂ ಜಾಯೇಗಾ” (ಮೋದಿ ಎಲ್ಲಿಗೂ ಹೋಗುವುದಿಲ್ಲ) ಎಂದು ಪ್ರತಿಕ್ರಿಯಿಸಿದ್ದರು. ಇದರಿಂದ ಆಕ್ರೋಶಗೊಂಡ ಖರ್ಗೆ, “ಮೋದಿ ಕಾ ಬಾಪ್ ಭೀ ಜಾಯೇಗಾ” (ಮೋದಿಯವರ ತಂದೆಯೂ ಹೋಗಬೇಕಾಗುತ್ತದೆ) ಎಂದು ಹೇಳಿದ್ದರು. ಈ ಮಾತನ್ನು ಮೂರು ಬಾರಿ ಪುನರುಚ್ಚರಿಸಿದ್ದರು.
ಇದರಿಂದ ಸಭೆಯಲ್ಲಿ ಗದ್ದಲ ಉಂಟಾಗಿತ್ತು. ಮೋದಿ ಎಲ್ಲಿಗೂ ಹೋಗುವುದಿಲ್ಲ ಎಂದು ಹೇಳಿದ್ದ ಸಂತೋಷ್ ಕುಮಾರ್ ಅವರನ್ನು ಕಾಂಗ್ರೆಸ್ ಬೆಂಬಲಿಗರು ಥಳಿಸಿ, ಸಭೆಯಿಂದ ಹೊರಗೆ ಕಳುಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.
ಘಟನೆಯ ಬಳಿಕ ಸ್ಪಷ್ಟನೆ ನೀಡಿದ್ದ ಸಂತೋಷ್ ಕುಮಾರ್, ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದರು. ತಾನೂ ಮೋದಿ ಅಧಿಕಾರದಿಂದ ಕೆಳಗಿಳಿಯಲಿ ಎಂದೇ ಬಯಸುತ್ತೇನೆ. ಆದರೆ, “ದಂಗೆ ಏಳದ ಹೊರತು ಮೋದಿ ಹೋಗುವುದಿಲ್ಲ” ಎಂಬ ಅರ್ಥದಲ್ಲಿ ಮಾತನಾಡಿದ್ದೆ. ತಮ್ಮ ಮಾತಿನ ಒಂದು ಭಾಗವನ್ನಷ್ಟೇ ಕೇಳಿಸಿಕೊಂಡು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದರು.
ಈ ಘಟನೆಯ ಬೆನ್ನಲ್ಲೇ ಬಿಜೆಪಿ ಎಐ ವಿಡಿಯೋ ಬಿಡುಗಡೆ ಮಾಡುವ ಮೂಲಕ ಖರ್ಗೆ ಹೇಳಿಕೆಗೆ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




