*ನಂದಿನಿ ಮೊಸರಿನಲ್ಲಿ ಜಿಯೋ ಸಿಮ್ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್*: *ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು ಅಸಲಿ ಸತ್ಯ*

ಪ್ರಗತಿವಾಹಿನಿ ಸುದ್ದಿ: ನಂದಿನಿ ಮೊಸರು ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಮೊಸರು ಪ್ಯಾಕೆಟ್‌ನೊಳಗೆ ಸಿಮ್ ಕಾರ್ಡ್ ಬಂದಿರಲಿಲ್ಲ. ಬದಲಿಗೆ ದ್ವಿಚಕ್ರ ವಾಹನದ ಪೌಚ್‌ನಲ್ಲಿದ್ದ ಸಿಮ್ ಆಕಸ್ಮಿಕವಾಗಿ ಮೊಸರಿನೊಂದಿಗೆ ಸೇರಿತ್ತು ಎಂಬ ಸಂಗತಿ ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಅರುಣ್ ಕುಮಾರ್ ಎಂಬುವರು ತಾವು ಖರೀದಿಸಿದ ನಂದಿನಿ ಮೊಸರು ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಸಿಕ್ಕಿದೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ರಾಜ್ಯಾದ್ಯಂತ ವೈರಲ್ ಆಗಿ, ನಂದಿನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಚರ್ಚೆ ಹುಟ್ಟುಹಾಕಿತ್ತು.
ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸರು ಅರುಣ್ ಕುಮಾರ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ವಿಡಿಯೋದಲ್ಲಿದ್ದ ಸಿಮ್ ಕಾರ್ಡ್‌ನ ವಿವರಗಳನ್ನು ಪರಿಶೀಲಿಸಿದಾಗ ಅದು ಅರುಣ್ ಅವರ ಭಾವಮೈದನ ಹೆಸರಿನಲ್ಲಿ ನೋಂದಣಿಯಾಗಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಆ ಸಿಮ್ ಅನ್ನು ಅರುಣ್ ಅವರ ಪತ್ನಿಯೇ ಬಳಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಪೊಲೀಸರ ವಿಚಾರಣೆ ವೇಳೆ ಅರುಣ್ ಘಟನೆಯ ಬಗ್ಗೆ ವಿವರಿಸಿದ್ದು, ಅಂಗಡಿಯಿಂದ ಮೊಸರು ಪ್ಯಾಕೆಟ್ ತರುವಾಗ ದ್ವಿಚಕ್ರ ವಾಹನದ ಪೌಚ್‌ನಲ್ಲಿದ್ದ ಸಿಮ್ ಕಾರ್ಡ್ ಪ್ಯಾಕೆಟ್‌ನ ಹೊರಭಾಗಕ್ಕೆ ಅಂಟಿಕೊಂಡಿತ್ತು. ಮನೆಗೆ ಬಂದು ಮೊಸರನ್ನು ಬಾಣಲೆಗೆ ಸುರಿಯುವಾಗ ಪ್ಯಾಕೆಟ್‌ಗೆ ಅಂಟಿಕೊಂಡಿದ್ದ ಸಿಮ್ ಕೂಡ ಅದರೊಳಗೆ ಬಿದ್ದಿದೆ ಎಂದಿದ್ದಾರೆ.
ಇದನ್ನು ಗಮನಿಸದ ಅರುಣ್, ಮೊಸರು ಪ್ಯಾಕೆಟ್ ಒಳಗಿನಿಂದಲೇ ಸಿಮ್ ಬಂದಿದೆ ಎಂದು ಭಾವಿಸಿ ಆತುರದಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಪೊಲೀಸರ ವಿಚಾರಣೆಯಲ್ಲಿ ಸತ್ಯಾಂಶ ತಿಳಿದ ಬಳಿಕ ಅರುಣ್ ಕುಮಾರ್ ತಮ್ಮ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ನಂದಿನಿ ಬ್ರ್ಯಾಂಡ್ ಶುದ್ಧವಾಗಿದೆ. ಕಣ್ತಪ್ಪಿನಿಂದ ಹಾಗೂ ಗಾಬರಿಯಲ್ಲಿ ತಪ್ಪು ಆರೋಪ ಮಾಡಿದ್ದಾಗಿ ಸ್ಪಷ್ಟಪಡಿಸಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



