CrimeKarnataka NewsLatest

*ಕಬ್ಬು ಕಟಾವು ವಿಚಾರವಾಗಿ ಆರಂಭವಾದ ಜಗಳ*: *ತಂದೆ-ಮಗನ ಕೊಲೆಯಲ್ಲಿ ಅಂತ್ಯ*

ಪ್ರಗತಿವಾಹಿನಿ ಸುದ್ದಿ: ಬೇರೆಯವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವಿಚಾರವಾಗಿ ಆರಂಭವಾದ ವ್ಯಾಜ್ಯವೊಂದು ತಂದೆ ಮತ್ತು ಮಗನನ್ನೇ ಬಲಿ ತೆಗೆದುಕೊಂಡಿರುವ ಘಟನೆ ನಡೆದಿದೆ.

ಕಬ್ಬು ಕಟಾವು ಮಾಡುವ ವಿಚಾರವಾಗಿ ನಡೆದ ಎರಡು ಗುಂಪುಗಳ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ, ದೊಣ್ಣೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ ಪರಿಣಾಮ ತಂದೆ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದ ಹನುಮಂತ ಸಾಲವಾಡಗಿ ಹಾಗೂ ಆತನ ಪುತ್ರ ಮಂಜುನಾಥ ಸಾಲವಾಡಗಿ ಮೃತರು.

ತಂದೆ-ಮಗ ಇಬ್ಬರೂ ತಮ್ಮ ಸಂಬಂಧಿಕರೊಂದಿಗೆ ಕೃಷಿಕಾಯಕ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅದೇ ಗ್ರಾಮದ ಹನುಮವ್ವ ಮೇಟಿ ಎಂಬುವವರಿಗೆ ಸೇರಿದ ಸರ್ವೇ ನಂಬರ್ 213/2 ರ 8 ಎಕರೆ ಜಮೀನನ್ನು ಕಳೆದ ಎರಡು ವರ್ಷಗಳಿಂದ ಪಾಲು ಆಧಾರದ (ಅರ್ಧ ಭಾಗ ಉಳುಮೆ ಮಾಡಿದವರಿಗೆ) ಮೇಲೆ ಅವರು ಕೃಷಿ ಮಾಡಿಕೊಂಡು ಬರುತ್ತಿದ್ದರು.

ಕಳೆದ ಬಾರಿ ಈರುಳ್ಳಿ ಬೆಳೆದು ಪಾಲು ಮಾಡಿಕೊಂಡಿದ್ದ ಸಾಲವಾಡಗಿ ಕುಟುಂಬ, ಈ ಬಾರಿ ಅದೇ ಜಮೀನಿನಲ್ಲಿ ನಾಟಿ ಮಾಡಿದ್ದ ಕಬ್ಬು ಕಟಾವಿಗೆ ಮುಂದಾಗಿತ್ತು. ಕಾರ್ಮಿಕರನ್ನು ಕರೆಸಿ ಪೂಜೆ ಮಾಡಿ ಕಟಾವು ಮಾಡಲು ಹೋದಾಗ, ಜಮೀನು ಮಾಲೀಕ ಹನುಮವ್ವ ಮೇಟಿ ಅವರ ದಾಯಾದಿಗಳಾದ (ಅಣ್ಣ -ತಮ್ಮಂದಿರು) ಗಿರಿಯಪ್ಪ ಮೇಟಿ, ರಾಮಪ್ಪ ಮೇಟಿ, ಹನುಮಂತ ಮೇಟಿ, ನಾಗಪ್ಪ ಮೇಟಿ ಹಾಗೂ ಇತರರು ಸ್ಥಳಕ್ಕೆ ಆಗಮಿಸಿ, “ಇದು ವ್ಯಾಜ್ಯವಿರುವ ಜಮೀನು, ಕಬ್ಬು ಕಟಾವು ಮಾಡಲು ಬಿಡುವುದಿಲ್ಲ, ನಮ್ಮದೂ ಪಾಲಿದೆ” ಎಂದು ತಗಾದೆ ತೆಗೆದಿದ್ದಾರೆ.

ಜಮೀನು ವ್ಯಾಜ್ಯವಿದ್ದರೆ ಬಗೆಹರಿಸಿಕೊಳ್ಳಿ, ನಾವು ಸಾಲ ಮಾಡಿ ಕಬ್ಬು ಬೆಳೆದಿದ್ದೇವೆ, ಕಟಾವು ಮಾಡಲು ಬಿಡಿ ಎಂದು ಹನುಮಂತ ಸಾಲವಾಡಗಿ ಪರಿಪರಿಯಾಗಿ ಬೇಡಿಕೊಂಡರೂ ಆರೋಪಿಗಳು ಕೇಳಲಿಲ್ಲ. ಮಾತಿಗೆ ಮಾತು ಬೆಳೆದು ವಾಗ್ವಾದ ಉಂಟಾಗಿ, ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಈ ವೇಳೆ ಆಕ್ರೋಶಗೊಂಡ ಮೇಟಿ ಕುಟುಂಬದವರು ದೊಣ್ಣೆ ಮತ್ತು ಕಲ್ಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹನುಮಂತ ಸಾಲವಾಡಗಿ ಹಾಗೂ ಅವರ ಪುತ್ರ ಮಂಜುನಾಥ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಹಾದೇವಪ್ಪ ಹಾಗೂ ಮಲ್ಲಪ್ಪ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಲಕ್ಷ್ಮಣ ನಿಂಬರಗಿ, ಎಎಸ್ಪಿ ಕಟ್ಟಿಮನಿ ಹಾಗೂ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಗಿರಿಯಪ್ಪ ಮೇಟಿ, ರಾಮಪ್ಪ ಮೇಟಿ, ಹನುಮಂತ ಮೇಟಿ, ನಾಗಪ್ಪ ಮೇಟಿ ಸೇರಿದಂತೆ ಪ್ರಮುಖರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇತರರಿಗಾಗಿ ಶೋಧ ಮುಂದುವರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button