Kannada NewsKarnataka NewsLatestNational

*ಬ್ರೇಕಪ್‌ಗೆ ಮಾಜಿ ಗೆಳತಿಯ ಎರಡು ಸಾಕು ನಾಯಿಗಳ ಹತ್ಯೆ*: *ವಿಡಿಯೋ ಕಾಲ್‌ನಲ್ಲಿ ತೋರಿಸಿ ವಿಕೃತಿ ಮೆರೆದ ಪಾಗಲ್‌ ಪ್ರೇಮಿ*

ಪ್ರಗತಿವಾಹಿನಿ ಸುದ್ದಿ: ಪ್ರೇಮ ಸಂಬಂಧ ಮುರಿದುಬಿದ್ದರೆ ಸೇಡು ತೀರಿಸಿಕೊಳ್ಳಲು ಕೆಲವರು ಯಾವ ಹಂತಕ್ಕೂ ಇಳಿಯಬಹುದು ಎಂಬುದಕ್ಕೆ ಆಘಾತಕಾರಿ ಘಟನೆಯೊಂದು ಸಾಕ್ಷಿಯಾಗಿದೆ. ಮಾಜಿ ಗೆಳತಿಯ ಮೇಲಿನ ಕೋಪಕ್ಕೆ ಆಕೆಯ ಮುದ್ದಿನ ಸಾಕು ನಾಯಿಗಳನ್ನೇ ಗುರಿಯಾಗಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ನಾಯಿಗಳಿಗೆ ಹಿಂಸೆ ನೀಡಿ ಹತ್ಯೆ ಮಾಡಿರುವುದನ್ನು ವಿಡಿಯೋ ಕಾಲ್ ಮೂಲಕ ಮಾಜಿ ಗೆಳತಿಗೆ ತೋರಿಸಿದ್ದಾನೆ. ಈ ಘಟನೆ ಪ್ರಾಣಿ ಪ್ರಿಯರಲ್ಲಿ ಆಕ್ರೋಶ ಮೂಡಿಸಿದೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಜಾದವ್‌ಪುರ ಪ್ರದೇಶದ ಬಿಕ್ರಮ್‌ಗಢದಲ್ಲಿ ಈ ಘಟನೆ ನಡೆದಿದೆ. ಸಂಜೀಬ್ ಭಟ್ಟಾಚಾರ್ಯ ಎಂಬಾತ ತನ್ನ ಲಿವ್‌-ಇನ್ ಸಂಗಾತಿ ಡಿಜೆ ಪಾರಿ ನೋವಾ ಅವರೊಂದಿಗೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ.

ಇತ್ತೀಚೆಗೆ ಪಾರಿ ನೋವಾ, ಸಂಜೀಬ್‌ನಿಂದ ದೂರವಾಗಿ ಫ್ಲ್ಯಾಟ್ ತೊರೆದಿದ್ದರು. ಆದರೆ ತಮ್ಮ ಎರಡು ಸಾಕು ನಾಯಿಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಬ್ರೇಕಪ್‌ನಿಂದ ಕೋಪಗೊಂಡಿದ್ದ ಸಂಜೀಬ್, ಪಾರಿ ನೋವಾ ಅವರಿಗೆ ವಿಡಿಯೋ ಕಾಲ್ ಮಾಡಿ ಒಂದು ನಾಯಿಯ ಕುತ್ತಿಗೆಗೆ ನೇಣು ಬಿಗಿದು ತೋರಿಸಿದ್ದಾನೆ. ಮತ್ತೊಂದು ನಾಯಿಯನ್ನು ಹತ್ಯೆ ಮಾಡಿ ಅದನ್ನೂ ವಿಡಿಯೋ ಕಾಲ್‌ನಲ್ಲಿ ತೋರಿಸಿದ್ದಾನೆ. ಈ ಬಗ್ಗೆ ಪಾರಿ ನೋವಾ ಪೊಲೀಸರಿಗೆ ದೂರು ನೀಡಿದ್ದಾರೆ.

ಎರಡೂ ಸಾಕು ನಾಯಿಗಳ ಹತ್ಯೆಯ ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಾದವ್‌ಪುರ ಪೊಲೀಸರು ಫ್ಲ್ಯಾಟ್‌ಗೆ ಭೇಟಿ ನೀಡಿ ಸಂಜೀಬ್ ಭಟ್ಟಾಚಾರ್ಯನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

Back to top button