Kannada NewsKarnataka NewsLatestNationalPolitics

*ಭಾಷಣಕ್ಕೆ ಅವಕಾಶ ಸಿಗಲಿಲ್ಲವೆಂದು ಮೈಕ್ ಎಸೆದ ಶಾಸಕ*: *ಕುರ್ಚಿ ಹಿಡಿದು ಸಿಬ್ಬಂದಿಗೆ ಹಲ್ಲೆ ಯತ್ನ*

ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಅವಕಾಶ ಸಿಗದಿದ್ದಕ್ಕೆ ಕಾಂಗ್ರೆಸ್ ಶಾಸಕರೊಬ್ಬರು ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಯಲ್ಲಿದ್ದ ಮೈಕ್ ಎಸೆದು, ಭಾಷಣದ ಸ್ಟ್ಯಾಂಡ್ ಒದ್ದು ಬೀಳಿಸಿದ್ದಾರೆ. ಅಷ್ಟೇ ಅಲ್ಲದೆ, ಕುರ್ಚಿ ಎತ್ತಿಕೊಂಡು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರಾಖಂಡದ ಧಾರಚುಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ ಮಾಡಿದ ಅವಾಂತರದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ರಾಜ್ಯದ ಪ್ರಸಿದ್ಧ ಜೌಲ್ಜಿಬಿ ಮೇಳದಲ್ಲಿ ಈ ಹೈಡ್ರಾಮಾ ನಡೆದಿದ್ದು, ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಧಾಮಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಿರಲಿಲ್ಲ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಮುಖ್ಯಮಂತ್ರಿ ಭಾಷಣ ಮುಗಿಸಿ ಕಾರ್ಯಕ್ರಮದಿಂದ ನಿರ್ಗಮಿಸಿದ ಬಳಿಕ ಶಾಸಕ ಹರೀಶ್ ಸಿಂಗ್ ಧಾಮಿ ತಮ್ಮ ಬೆಂಬಲಿಗರೊಂದಿಗೆ ವೇದಿಕೆಗೆ ಬಂದಿದ್ದಾರೆ. ಮಾತನಾಡಲು ಮೈಕ್ ಹಿಡಿದಾಗ ಅದನ್ನು ಆಫ್ ಮಾಡಲಾಗಿದೆ. ಇದರಿಂದ ಕೋಪಗೊಂಡ ಶಾಸಕರು ಮೈಕ್ ಅನ್ನು ವೇದಿಕೆಯ ಮೇಲೆಯೇ ಎಸೆದು, ಪೋಡಿಯಂಗೆ ಒದ್ದು ಕೆಳಕ್ಕೆ ಬೀಳಿಸಿದ್ದಾರೆ.

ಬಳಿಕ ವೇದಿಕೆಯಿಂದ ಕೆಳಗಿಳಿದ ಅವರು, ಪ್ಲಾಸ್ಟಿಕ್ ಕುರ್ಚಿ ಎತ್ತಿಕೊಂಡು ಲೈಟ್ ಮತ್ತು ಸೌಂಡ್ ವ್ಯವಸ್ಥೆ ನಿರ್ವಹಿಸುತ್ತಿದ್ದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಮೈಕ್ ಆಫ್ ಮಾಡಿದ ಬಳಿಕ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿರುದ್ಧ ಶಾಸಕ ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕವಾಗಿ ಮಾತನಾಡುವ ತಮ್ಮ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗೆ ಧೈರ್ಯವಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಧಾರಚುಲಾ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲು ಹಾಕಿದ್ದಾರೆ.

ಶಾಸಕರ ಬೆಂಬಲಿಗರೂ ವೇದಿಕೆಯ ಮುಂಭಾಗ ಜಮಾಯಿಸಿ ಘೋಷಣೆಗಳನ್ನು ಕೂಗಿದ್ದರಿಂದ ಸ್ಥಳದಲ್ಲಿ ಗದ್ದಲ ಉಂಟಾಗಿದೆ. ಪರಿಸ್ಥಿತಿ ಕೈಮೀರುವುದನ್ನು ಗಮನಿಸಿದ ಪೊಲೀಸರು ಮಧ್ಯಪ್ರವೇಶಿಸಿ ಶಾಸಕರು ಹಾಗೂ ಬೆಂಬಲಿಗರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಚಿವ ರಘುವೀರ್ ಸಿಂಗ್, ಸಾರ್ವಜನಿಕ ವೇದಿಕೆಯಲ್ಲಿ ಜನಪ್ರತಿನಿಧಿಯೊಬ್ಬರು ಈ ರೀತಿ ವರ್ತಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ಖಂಡಿಸಿದ್ದಾರೆ.

ಜನರ ಸಮಸ್ಯೆಗಳನ್ನು ಆಲಿಸಬೇಕಾದ ಜನಪ್ರತಿನಿಧಿಯೊಬ್ಬರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿಬ್ಬಂದಿಯೊಂದಿಗೆ ನಡೆದುಕೊಂಡ ರೀತಿಯ ಕುರಿತು ಇದೀಗ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

Related Articles

Back to top button