*ಕಾನ್ಸ್ಟೆಬಲ್ ಮೇಲೆ ಗುಂಡು ಹಾರಿಸಿ ಪರಾರಿ*: *ಪೊಲೀಸರ ಎನ್ಕೌಂಟರ್ನಲ್ಲಿ ಆರೋಪಿ ಸಾವು*

ಪ್ರಗತಿವಾಹಿನಿ ಸುದ್ದಿ: ಪೊಲೀಸ್ ಕಾನ್ಸ್ಟೆಬಲ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ ಆರೋಪಿ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ. ಬಂಧನದಿಂದ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆಯೇ ಮತ್ತೆ ಗುಂಡು ಹಾರಿಸಿದ್ದಾನೆ. ಇದಕ್ಕೆ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆರೋಪಿ ಮೃತಪಟ್ಟಿದ್ದಾನೆ.
ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ನನೂರ್ ಪ್ರದೇಶದ ಇಟ್ಟಿಗೆ ಗೂಡಿನಲ್ಲಿ ಘಟನೆ ನಡೆದಿದೆ. ರತನ್ ಶೇಖ್ ಮೃತಪಟ್ಟ ಆರೋಪಿ. ನವೆಂಬರ್ 13ರಂದು ಶಾಂತಿನಿಕೇತನ ಪೊಲೀಸ್ ಠಾಣಾ ವ್ಯಾಪ್ತಿಯ ಲೈಕ್ ಬಜಾರ್ನಲ್ಲಿ ಆತನನ್ನು ಬಂಧಿಸಲು ಪೊಲೀಸರು ಯತ್ನಿಸಿದ್ದರು.
ಬಂಧನದ ವೇಳೆ ರತನ್ ಶೇಖ್ ಕಾನ್ಸ್ಟೆಬಲ್ ಬಿಸ್ವಜಿತ್ ದಾಸ್ ಅವರ ಮೇಲೆ ಗುಂಡು ಹಾರಿಸಿದ್ದ. ಘಟನೆಯಲ್ಲಿ ಕಾನ್ಸ್ಟೆಬಲ್ ಅವರ ಕಾಲಿಗೆ ಗಾಯವಾಗಿತ್ತು. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.
ಆತನಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರು ಭಾನುವಾರ ನನೂರ್ನ ಇಟ್ಟಿಗೆ ಗೂಡಿನಲ್ಲಿ ಪತ್ತೆಹಚ್ಚಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ರತನ್ ಶೇಖ್ ಸಾವನ್ನಪ್ಪಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ಯಾರಾದರೂ ಪೊಲೀಸರ ಮೇಲೆ ಗುಂಡು ಹಾರಿಸಿದರೆ, ಪೊಲೀಸರು ಅವರಿಗೆ ಸಿಹಿತಿಂಡಿ ನೀಡಬೇಕೇ?” ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ಆರು ತಿಂಗಳ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಐದನೇ ಪೊಲೀಸ್ ಎನ್ಕೌಂಟರ್ ಇದಾಗಿದೆ ಎಂದು ವರದಿಯಾಗಿದೆ.




