Kannada NewsLatestWorld

*ಭೀಕರ ಬೆಂಕಿ ಅವಘಡ*: *11 ಜನರು ಸಾವು; 16 ಜನರ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಪ್ರಸಿದ್ಧ ಪ್ರವಾಸಿ ತಾಣವೊಂದರಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, 11 ಜನರು ಸಾವನ್ನಪ್ಪಿದ್ದಾರೆ. 16 ಜನರು ಗಾಯಗೊಂಡಿರುವ ಘಟನೆ ನಡೆದಿದೆ.

ವಾಣಿಜ್ಯ ಕಟ್ಟಡವೊಂದರಲ್ಲಿ ಸೋಮವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, 16 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಥೈಲ್ಯಾಂಡ್‌ನ ಜನಪ್ರಿಯ ಪ್ರವಾಸಿ ತಾಣವಾದ ಫುಕೆಟ್‌ನಲ್ಲಿ ಈ ದುರಂತ ಸಂಭವಿಸಿದೆ. ಫುಕೆಟ್‌ನ ಪಶ್ಚಿಮ ಕರಾವಳಿಯಲ್ಲಿರುವ ಪ್ರಸಿದ್ಧ ಪಟೋಂಗ್ ಬೀಚ್ ಸಮೀಪ ಈ ಘಟನೆ ನಡೆದಿದೆ.

ಇಂದು ಬೆಳಗಿನ ಜಾವ ಸುಮಾರು 3.17ರ ವೇಳೆಗೆ ವಾಹನ ಬಾಡಿಗೆ ವ್ಯವಹಾರ ನಡೆಸುತ್ತಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆರಂಭದಲ್ಲಿ ಒಂದು ಕಟ್ಟಡಕ್ಕೆ ಸೀಮಿತವಾಗಿದ್ದ ಬೆಂಕಿ, ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದೆ.

ಬೆಂಕಿ ಕಾಣಿಸಿಕೊಂಡಾಗ ಕಟ್ಟಡದ ಮೇಲಿನ ಮಹಡಿಗಳಲ್ಲಿ ಹಲವರು ಇದ್ದರು. ದಟ್ಟವಾದ ಹೊಗೆ ಕಟ್ಟಡವನ್ನೆಲ್ಲ ಆವರಿಸಿದ್ದರಿಂದ ಅಲ್ಲಿದ್ದವರಿಗೆ ಹೊರಬರಲು ತೊಂದರೆಯಾಗಿದೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸುಮಾರು ಎರಡು ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಬಳಿಕ ಕಟ್ಟಡದಲ್ಲಿ ಪರಿಶೀಲನೆ ನಡೆಸಿದಾಗ 11 ಜನರು ಮೃತಪಟ್ಟಿರುವುದು ಪತ್ತೆಯಾಗಿದೆ. ಇನ್ನು 16 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಗೆ ಸೇವನೆ ಮತ್ತು ಒಡೆದ ಗಾಜಿನಿಂದ ಉಂಟಾದ ಗಾಯಗಳಿಂದ ಕೆಲವರು ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ 15 ಮಂದಿ ಥಾಯ್ಲೆಂಡ್‌ನ ಪ್ರಜೆಗಳಾಗಿದ್ದು, ಒಬ್ಬರು ಮ್ಯಾನ್ಮಾರ್ ದೇಶದವರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರವಾಸಿಗರು ಮೃತಪಟ್ಟಿಲ್ಲ ಅಥವಾ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Related Articles

Back to top button