CrimeKannada NewsKarnataka NewsLatest

*ಸ್ಪೀಡ್ ಬೋಟ್ ದುರಂತದ ಬಳಿಕ ಮಹತ್ವದ ನಿರ್ಧಾರ*: *ಹಾರಂಗಿ ಹಿನ್ನೀರಿನಲ್ಲಿ ವಾಟರ್ ಸ್ಪೋರ್ಟ್ಸ್ ಸ್ಥಗಿತ*

ಪ್ರಗತಿವಾಹಿನಿ ಸುದ್ದಿ: ಕೊಡಗು ಜಿಲ್ಲೆಯ ಹಾರಂಗಿ ಹಿನ್ನೀರಿನಲ್ಲಿ ಸಂಭವಿಸಿದ ಸ್ಪೀಡ್ ಬೋಟ್ ದುರಂತ ಇಬ್ಬರ ಜೀವ ಬಲಿ ಪಡೆದಿದೆ. ಗುಜರಾತ್ ಮೂಲದ ದಂಪತಿ ಮೃತಪಟ್ಟ ಘಟನೆ ಬೆನ್ನಲ್ಲೇ ಅಧಿಕಾರಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ ಆದೇಶದವರೆಗೆ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರವಾಸಿಗರ ಸುರಕ್ಷತೆ ಮತ್ತು ಅಪಘಾತದ ನಿಖರ ಕಾರಣದ ಕುರಿತು ಈಗ ಪ್ರಶ್ನೆಗಳು ಎದ್ದಿವೆ.

ಕುಶಾಲನಗರ ತಾಲೂಕಿನ ಹಾರಂಗಿ ಹಿನ್ನೀರಿನಲ್ಲಿ ನವೆಂಬರ್ 13ರಂದು ಸ್ಪೀಡ್ ಬೋಟ್ ಅಪಘಾತ ಸಂಭವಿಸಿತ್ತು. ಮರಣೋತ್ತರ ಪರೀಕ್ಷೆ ಬಳಿಕ ನವೆಂಬರ್ 14ರಂದು ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಜಲಸಾಹಸ ಕ್ರೀಡೆ ನಡೆಸುತ್ತಿದ್ದ ಖಾಸಗಿ ಕಂಪನಿ ಮೃತದೇಹಗಳನ್ನು ಬೆಂಗಳೂರಿನಿಂದ ವಿಮಾನದ ಮೂಲಕ ಗುಜರಾತ್‌ಗೆ ಕಳುಹಿಸಲು ವ್ಯವಸ್ಥೆ ಮಾಡಿತ್ತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಘಟನೆ ಹಿನ್ನೆಲೆಯಲ್ಲಿ ಶಾಸಕ ಡಾ. ಮಂತರ್ ಗೌಡ ಅವರು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಮೃತ ದಂಪತಿಯ ಮಕ್ಕಳಿಗೆ ಸಾಂತ್ವನ ಹೇಳಿದರು. ದುರಂತಕ್ಕೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಭರವಸೆ ನೀಡಿದರು. ಅಪಘಾತದ ನಿಖರ ಕಾರಣ ತಿಳಿಯಲು ಸಮಗ್ರ ತನಿಖೆ ನಡೆಸಲಾಗುವುದು ಎಂದರು.

ಹಾರಂಗಿ ಹಿನ್ನೀರಿನಲ್ಲಿ 2023ರಿಂದ ಖಾಸಗಿ ಕಂಪನಿಯೊಂದು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಅನುಮತಿಯೊಂದಿಗೆ ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿತ್ತು. ಇದೇ ಕಂಪನಿಯ ಸ್ಪೀಡ್ ಬೋಟ್‌ನಲ್ಲಿ ದಂಪತಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.

ಕಂಪನಿಯ ಉದ್ಯೋಗಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಸ್ಪೀಡ್ ಬೋಟ್ ತಿರುವಿನಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಮಗುಚಿಕೊಂಡಿದೆ. ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತಾದರೂ, ಬೋಟ್ ಅಡಿಯಲ್ಲಿ ಸಿಲುಕಿದ್ದ ದಂಪತಿಯನ್ನು ರಕ್ಷಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಅಪಘಾತದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಆರ್. ಎನ್. ಬಿಂದುಮಣಿ, ಜಲಕ್ರೀಡೆ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಲೈಫ್ ಜಾಕೆಟ್‌ಗಳನ್ನು ಒದಗಿಸಲಾಗಿತ್ತು. ಬೋಟ್‌ನಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಕಂಪನಿಯು ವಿಮೆ ಸೇರಿದಂತೆ ಎಲ್ಲ ನಿಯಮಗಳನ್ನು ಪಾಲಿಸಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ, ಸ್ಪೀಡ್ ಬೋಟ್ ನಿಯಂತ್ರಣ ತಪ್ಪಿ ಮಗುಚಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆಯ ಮೂಲಕ ದುರಂತದ ಹಿಂದಿನ ಕಾರಣ ಪತ್ತೆಹಚ್ಚಬೇಕಿದೆ.

Related Articles

Back to top button