*ಕುಟುಂಬ ಸಾಮರಸ್ಯಕ್ಕೆ ಜೀವನ ಮೌಲ್ಯ, ಪರಸ್ಪರ ಪ್ರೀತಿ, ವಿಶ್ವಾಸ ಮುಖ್ಯ*; *ಅಣ್ಣಪ್ಪ ಹೆಗಡೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಕುಟುಂಬದಲ್ಲಿ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಸಬೇಕಾದರೆ ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧದಲ್ಲಿ ಪರಸ್ಪರ ಪ್ರೀತಿ, ಗೌರವ, ವಿಶ್ವಾಸ, ಹೊಂದಾಣಿಕೆ ಹಾಗೂ ಜೀವನ ಮೌಲ್ಯಗಳು ಅತ್ಯಂತ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಳಗಾವಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಹೆಗಡೆ ಅಭಿಪ್ರಾಯಪಟ್ಟರು.
ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ತನ್ನ ಸುವರ್ಣ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರ, ‘ಸಂಗಾತಿ’ ಕೌಟುಂಬಿಕ ಸಲಹಾ ಕೇಂದ್ರ, ‘ಸಾಂತ್ವನ’ ಮಹಿಳಾ ಸಹಾಯವಾಣಿ ಹಾಗೂ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ‘ಕೂಡಿ ಬಾಳೋಣ’ ಅಭಿಯಾನದಡಿ ಆಯೋಜಿಸಿದ್ದ ಅತ್ತೆ–ಸೊಸೆಯಂದಿರ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ನಗರದ ಬಸವನ ಕುಡಚಿಯ ದೇವರಾಜ ಅರಸ ಕಾಲನಿಯಲ್ಲಿರುವ ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟ್ನ ಚಿನ್ನಮ್ಮ ಬ. ಹಿರೇಮಠ ವೃದ್ಧಾಶ್ರಮದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಣ್ಣಪ್ಪ ಹೆಗಡೆ ಅವರು, ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧವನ್ನು ಸಂಘರ್ಷದ ದೃಷ್ಟಿಯಿಂದ ನೋಡದೆ, ತಾಯಿ ಮತ್ತು ಮಗಳಂತೆ ಪರಸ್ಪರ ಪ್ರೀತಿ, ಸಹನೆ, ಗೌರವ ಹಾಗೂ ವಿಶ್ವಾಸದಿಂದ ಬೆಳೆಸಿಕೊಳ್ಳಬೇಕು. ಕುಟುಂಬದಲ್ಲಿ ಮುಕ್ತ ಸಂವಾದ ಮತ್ತು ಪರಸ್ಪರ ಹೊಂದಾಣಿಕೆ ಇದ್ದಾಗ ಮಾತ್ರ ಸುಖಿ ಕುಟುಂಬ ನಿರ್ಮಾಣ ಸಾಧ್ಯ ಎಂದು ಸಂದೇಶ ನೀಡಿದರು.
ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ ವೈಜಯಂತಿ ಚೌಗಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರು ಮಾತನಾಡಿ, ಅತ್ತೆ–ಸೊಸೆಯ ಸಂಬಂಧದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆ, ಭಾವನೆಗಳಿಗೆ ಗೌರವ ನೀಡುವ ಮನೋಭಾವ ಹಾಗೂ ಮುಕ್ತ ಸಂವಹನ ಬಹಳ ಮುಖ್ಯ. ಪ್ರತಿಯೊಂದು ತಲೆಮಾರಿಗೂ ತನ್ನದೇ ಆದ ಆಲೋಚನೆ, ಜೀವನಶೈಲಿ ಮತ್ತು ಅನುಭವಗಳಿರುತ್ತವೆ. ಹಿರಿಯರು ಕಿರಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಹಾಗೂ ಕಿರಿಯರು ಹಿರಿಯರ ಅನುಭವಗಳಿಗೆ ಗೌರವ ನೀಡಬೇಕು. ಪರಸ್ಪರ ಆರೋಪ ಮತ್ತು ಅಹಂಕಾರಗಳನ್ನು ಬದಿಗಿಟ್ಟು ಸ್ನೇಹಪೂರ್ವಕವಾಗಿ ನಡೆದುಕೊಂಡಾಗ ಕುಟುಂಬ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತವೆ ಎಂದು ತಿಳಿಸಿದರು.
ಡಾ. ಸ.ಜ. ನಾಗಲೋತಿಮಠ ವಿಜ್ಞಾನ ಕೇಂದ್ರದ ಯೋಜನಾ ಸಂಯೋಜಕರಾದ ರಾಜಶೇಖರ ಪಾಟೀಲ ಅವರು ಮಾತನಾಡಿ, ಕುಟುಂಬವು ಕೇವಲ ರಕ್ತಸಂಬಂಧಗಳ ಒಕ್ಕೂಟವಲ್ಲ; ಅದು ಪ್ರೀತಿ, ನಂಬಿಕೆ, ಜವಾಬ್ದಾರಿ ಮತ್ತು ಪರಸ್ಪರ ಸಹಕಾರದ ಮೇಲೆ ನಿಂತಿರುವ ವ್ಯವಸ್ಥೆಯಾಗಿದೆ. ಅತ್ತೆ ಮತ್ತು ಸೊಸೆಯ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಕುಟುಂಬದಲ್ಲಿ ಮಹಿಳೆಯರ ಪಾತ್ರವನ್ನು ಗುರುತಿಸಿ, ಅವರ ಅಭಿಪ್ರಾಯ ಮತ್ತು ಸ್ವಾಭಿಮಾನಕ್ಕೆ ಮನ್ನಣೆ ನೀಡಬೇಕು. ಒಬ್ಬರನ್ನೊಬ್ಬರು ಬದಲಾಯಿಸುವ ಪ್ರಯತ್ನಕ್ಕಿಂತ ಪರಸ್ಪರ ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ಸುಂದರ ಕುಟುಂಬ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ. ಎಲ್. ಪಾಟೀಲ ಹಾಗೂ ಡಿ.ಇ.ಎಸ್. ಬೆಳಗಾವಿಯ ಉಪನಿರ್ದೇಶಕರಾದ ಆರ್. ಬಿ. ಬನಶಂಕರಿ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಎಂ. ಎಸ್. ಚೌಗಲಾ, ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಜಯಶ್ರೀ ಕೆಂಗೇರಿ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಸುರೇಖಾ ಪಾಟೀಲ, ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಅತ್ತೆ–ಸೊಸೆಯಂದಿರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ರೇಡಿಯೋ ನಿರೂಪಕರಾದ ಆರ್.ಜೆ. ಚೇತನ್ ನಡೆಸಿಕೊಟ್ಟರು. ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ದೀಪಾ ಹಳಮನಿ ವಂದಿಸಿದರು.




