*ಸೆಂಚೂರಿ ಬಾರಿಸಿದ ಬಿಳಿಜೋಳ*: *ಉತ್ತರ ಕರ್ನಾಟಕದ ಜೋಳದ ರೊಟ್ಟಿಗೂ ತಟ್ಟಿದ ಬೆಲೆ ಏರಿಕೆ ಬಿಸಿ*

ಪ್ರಗತಿವಾಹಿನಿ ಸುದ್ದಿ: ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಳಿ ಜೋಳ ಸೆಂಚೂರಿ ಬಾರಿಸಿದೆ. ಬಿಳಿಜೋಳದ ದರ ಪ್ರತಿ ಕೆ.ಜಿ.ಗೆ 100 ರೂ.ರ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.
ಈ ಮೂಲಕ ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರ ಜೋಳದ ರೊಟ್ಟಿಗೂ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೆಡೆ ರೈತರಿಗೆ ಬಂಪರ್ ಬೆಲೆ ಸಿಕ್ಕ ಖುಷಿಯಿದ್ದರೆ, ಮತ್ತೊಂದೆಡೆ ರೊಟ್ಟಿ ದರ ದುಬಾರಿಯಾಗುವ ಆತಂಕ ಮನೆಮಾಡಿದೆ.
ಈ ಹಿಂದೆ ಪ್ರತಿ ಕೆ.ಜಿ.ಗೆ 40 ರಿಂದ 50 ರೂ. ರಷ್ಟಿದ್ದ ಬಿಳಿಜೋಳದ ದರ ಇದೀಗ 100 ರಿಂದ 110 ರೂ. ರವರೆಗೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 5 ಸಾವಿರ ರೂ. ಇದ್ದ ಜೋಳದ ಬೆಲೆ ಈಗ ಬರೋಬ್ಬರಿ 8 ಸಾವಿರ ರೂ. ಗಡಿ ದಾಟಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಈ ಹಿಂದೆ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿತ್ತು. ಆದರೆ ಇದೀಗ ಜೋಳದ ಬಿತ್ತನೆ ಪ್ರಮಾಣ 30ರಿಂದ 40 ಸಾವಿರ ಹೆಕ್ಟೇರ್‌ಗೆ ಸೀಮಿತವಾಗಿದೆ. ರೈತರು ಜೋಳದ ಬದಲಿಗೆ ಕಬ್ಬು ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಬರಗಾಲದ ಪರಿಣಾಮವೂ ಜೋಳದ ಇಳುವರಿ ಮತ್ತು ಉತ್ಪಾದನೆಯ ಮೇಲೆ ಬೀರಿದೆ.
ಜೋಳದ ಬೆಲೆ ಹೆಚ್ಚಳದಿಂದಾಗಿ ಮಾರುಕಟ್ಟೆಯಲ್ಲಿ ಖರೀದಿಯೂ ಕಡಿಮೆಯಾಗಿದೆ. ಈ ಹಿಂದೆ ದಿನಕ್ಕೆ 2ರಿಂದ 3 ಕ್ವಿಂಟಲ್ ಜೋಳ ಮಾರಾಟವಾಗುತ್ತಿತ್ತು. ಆದರೆ ಈಗ ಗರಿಷ್ಠ ಒಂದು ಕ್ವಿಂಟಲ್ ಮಾತ್ರ ಮಾರಾಟವಾಗುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಮತ್ತೊಂದೆಡೆ, ಬಿತ್ತನೆ ಪ್ರಮಾಣ ಕಡಿಮೆಯಾಗಿರುವುದರಿಂದ ರೈತರಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಜೋಳ ಪೂರೈಕೆಯಾಗುತ್ತಿಲ್ಲ.
ಜೋಳದ ಬೆಲೆ ಏರಿಕೆಯಿಂದ ಉತ್ತರ ಕರ್ನಾಟಕದ ಜನರ ನೆಚ್ಚಿನ ಜೋಳದ ರೊಟ್ಟಿ ಊಟದ ಬೆಲೆಯೂ ಹೆಚ್ಚಾಗುವ ಆತಂಕ ಎದುರಾಗಿದೆ. ಈಗಾಗಲೇ ಜೋಳ ಖರೀದಿಸಲು ಹೆಚ್ಚಿನ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರೊಟ್ಟಿ ಊಟದ ದರವನ್ನೂ ಜಾಸ್ತಿ ಮಾಡುವುದು ಅನಿವಾರ್ಯ ಎನ್ನುತ್ತಿದ್ದಾರೆ ಖಾನಾವಳಿ ಮಾಲೀಕರು.



