Kannada NewsLatestNational

*ವಂದೇ ಭಾರತ್ ರೈಲು ಪ್ರಯಾಣಿಸಿದ ಕುಟುಂಬದ 12 ಜನರಿಗೆ ದಂಡ ವಿಧಿಸಿದ ರೈಲ್ವೆ ಇಲಾಖೆ*: *ಕಾರಣವೇನು?*

ಪ್ರಗತಿವಾಹಿನಿ ಸುದ್ದಿ: ವಂದೇ ಭಾರತ್ ರೈಲು ಹತ್ತಿ 140 ಕೀ.ಮೀ ಪ್ರಯಾಣಿಸಿದ ಒಂದೇ ಕುಟುಂಬದ 12 ಜನರಿಗೆ ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸಂಬಂಧಿಕರನ್ನು ಬಿಡಲು ಬಂದು ವಂದೇ ಭಾರತ್ ರೈಲು ಹತ್ತಿದ್ದ 12 ಮಂದಿ ರೈಲಿನ ಡೋರ್ ಲಾಕ್ ಆಗಿ ಸಿಲುಕಿಕೊಂಡ ಪರಿಣಾಮ 140 ಕೀ.ಮೀ ಪ್ರಯಾಣಿಸಿದ್ದಾರೆ. ಇದಕ್ಕೆ 36 ಸಾವಿರ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರೈಲು ಹತ್ತಿ ಸಂಬಂಧಿಕರನ್ನು ಸೀಟಿನಲ್ಲಿ ಕೂರಿಸುತ್ತಿರುವ ಸಂದರ್ಭದಲ್ಲಿ ರೈಲಿನ ಬಾಗಿಲುಗಳು ಸ್ವಯಂಚಾಲಿತವಾಗಿ ಮುಚ್ಚಿಕೊಂಡ ಪರಿಣಾಮ ಅವರೆಲ್ಲರೂ ರೈಲಿನಲ್ಲಿ ಲಾಕ್ ಆಗಿದ್ದಾರೆ. ರೈಲಿನಿಂದ ಕೆಳಗೆ ಇಳಿಯಲಾಗದೆ 140 ಕಿ.ಮೀ ಪ್ರಯಾಣಿಸುವಂತಾಯಿತು. ಬಳಿಕ ಇಟಾವಾ ನಿಲ್ದಾಣದಲ್ಲಿ ಇಳಿದಿದ್ದಾರೆ. ಬಳಿಕ ರೈಲ್ವೆ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪ್ರತಿಯೊಬ್ಬರಿಗೂ ತಲಾ 3 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಈ ಘಟನೆ ವಾರಾಣಸಿಯಿಂದ ನವದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ. ರೈಲು ಸಂಖ್ಯೆ 22415 ಕಾನ್ಪುರ ಸೆಂಟ್ರಲ್ ನಿಲ್ದಾಣಕ್ಕೆ ಬಂದಾಗ, ಅಲ್ಲಿನ 12 ಮಂದಿ ತಮ್ಮ ಸಂಬಂಧಿಕರನ್ನು ಬೀಳ್ಕೊಡಲು ರೈಲು ಹತ್ತಿದ್ದಾರೆ. ಕುಟುಂಬ ಸದಸ್ಯರು ರೈಲಿನಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಅವರು ಒಳಗೆ ಹೋಗಿದ್ದರು ಎನ್ನಲಾಗಿದೆ.

ಅವರು ರೈಲಿನಿಂದ ಕೆಳಗಿಳಿಯುವಷ್ಟರಲ್ಲಿ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡಿವೆ. ರೈಲು ಹೊರಡುವ ಸಮಯವಾಗಿದ್ದರಿಂದ ಬಾಗಿಲುಗಳು ಲಾಕ್ ಆಗಿವೆ. ಇದರಿಂದಾಗಿ ಒಳಗಿದ್ದ 12 ಮಂದಿಗೆ ಕಾನ್ಪುರ ನಿಲ್ದಾಣದಲ್ಲೇ ಇಳಿಯಲು ಸಾಧ್ಯವಾಗಿಲ್ಲ. ರೈಲು ಚಲಿಸಲು ಆರಂಭಿಸಿದ ಬಳಿಕ ತಾವು ರೈಲಿನೊಳಗೆ ಸಿಲುಕಿರುವುದು ಅವರಿಗೆ ಅರಿವಾಗಿದೆ. ತಕ್ಷಣ ರೈಲ್ವೆ ಸಿಬ್ಬಂದಿಗೆ ವಿಷಯ ತಿಳಿಸಿ ಬಾಗಿಲು ತೆರೆಯುವಂತೆ ಮನವಿ ಮಾಡಿದ್ದಾರೆ. ಆದರೆ ರೈಲು ಚಲಿಸುತ್ತಿರುವಾಗ ಸುರಕ್ಷತಾ ನಿಯಮಗಳ ಕಾರಣಕ್ಕೆ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಮಹಿಳೆಯರು ಮತ್ತು ಮಕ್ಕಳು ಕೂಡ ಈ ಗುಂಪಿನಲ್ಲಿದ್ದರು ಎಂದು ವರದಿಯಾಗಿದೆ.

ವಿಷಯ ತಿಳಿದ ರೈಲು ಸಿಬ್ಬಂದಿ ತುಂಡ್ಲಾ ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಸೂಚನೆ ಬಂದ ಬಳಿಕ ಭಾನುವಾರ ಬೆಳಗ್ಗೆ 10.49ರ ಸುಮಾರಿಗೆ ರೈಲನ್ನು ಇಟಾವಾ ಜಂಕ್ಷನ್‌ನಲ್ಲಿ ನಿಲ್ಲಿಸಲಾಗಿದೆ. ಕಾನ್ಪುರದಿಂದ ಸುಮಾರು 140 ಕಿಲೋಮೀಟರ್ ದೂರದಲ್ಲಿರುವ ಇಟಾವಾದಲ್ಲಿ ಕೊನೆಗೂ 12 ಮಂದಿ ರೈಲಿನಿಂದ ಕೆಳಗಿಳಿದಿದ್ದಾರೆ.

ಇಟಾವಾ ನಿಲ್ದಾಣದಲ್ಲಿ ರೈಲು ನಿಂತ ತಕ್ಷಣ ರೈಲ್ವೆ ರಕ್ಷಣಾ ಪಡೆ (RPF) ಮತ್ತು ಸರ್ಕಾರಿ ರೈಲ್ವೆ ಪೊಲೀಸ್ (GRP) ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಟೇಷನ್ ಸೂಪರಿಂಟೆಂಡೆಂಟ್ ಪಿ.ಎಂ. ಮೀನಾ, ಆರ್‌ಪಿಎಫ್ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಸಿಂಗ್ ಹಾಗೂ ಜಿಆರ್‌ಪಿ ಇನ್ಸ್‌ಪೆಕ್ಟರ್ ಯದುವೀರ್ ಸಿಂಗ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ನಂತರ 12 ಮಂದಿಯನ್ನು ಸುರಕ್ಷಿತವಾಗಿ ರೈಲಿನಿಂದ ಕೆಳಗಿಳಿಸಿ ಆರ್‌ಪಿಎಫ್ ಕಚೇರಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ವಿಚಾರಣೆ ನಡೆಸಿ ಘಟನೆಯ ವಿವರಗಳನ್ನು ದಾಖಲಿಸಿಕೊಳ್ಳಲಾಗಿದೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ಮಾನ್ಯ ಟಿಕೆಟ್ ಅಥವಾ ಅನುಮತಿಯಿಲ್ಲದೆ ರೈಲನ್ನು ಪ್ರವೇಶಿಸಿರುವುದು ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ವಾಣಿಜ್ಯ ವಿಭಾಗವು ಪ್ರತಿಯೊಬ್ಬರಿಗೂ 3,000 ರೂಪಾಯಿಯಂತೆ ದಂಡ ವಿಧಿಸಿದೆ. ಒಟ್ಟು 12 ಮಂದಿಯಿಂದ 36,000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಬಳಿಕ ಎಚ್ಚರಿಕೆ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ.

Related Articles

Back to top button