*ಏಳು ಕೊಲೆಗಳ ಬಳಿಕ ಇಡೀ ರಾತ್ರಿ ನಿದ್ದೆಯಿಲ್ಲದೆ ಕಳೆದ ಹಂತಕ*: *ಆತ್ಮಗಳ ಭಯಕ್ಕೆ ದೇವಸ್ಥಾನಕ್ಕೆ ಓಡಿದ ಪಾಪಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ರಾಜಾಜಿನಗರದಲ್ಲಿ ಏಳು ಜನರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಇಷ್ಟು ಭೀಕರ ಕೃತ್ಯ ಎಸಗಿದ್ದ ಆರೋಪಿ ಇಂದುಶೇಖರ್ಗೆ ಕೊಲೆಯಾದವರ ಆತ್ಮಗಳ ಭಯ ಕಾಡತೊಡಗಿತ್ತಂತೆ. ಅಂದು ರಾತ್ರಿ ಮನೆಯಲ್ಲೇ ನಿದ್ದೆ ಮಾಡಲಾಗದೆ ದೇವರ ನಾಮಸ್ಮರಣೆ ಮಾಡುತ್ತಾ ಓಡಾಡಿದ್ದಾನೆ ಎನ್ನಲಾಗಿದೆ. ಕೊಲೆಗಳ ಬಳಿಕ ಆತ ನಡೆದುಕೊಂಡ ರೀತಿ ಇದೀಗ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕೊಲೆ ಮಾಡುವ ಮೊದಲು ಇಂದುಶೇಖರ್ ತನ್ನ ಪತ್ನಿ ಸುನಿತಾ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದ ಎಂದು ವರದಿಯಾಗಿದೆ. “ಯಾಕೆ ಹೊಡೆಯುತ್ತಿದ್ದೀಯಾ?” ಎಂದು ಸುನಿತಾ ಪ್ರಶ್ನಿಸಿದಾಗ, “ನಿನ್ನಿಂದಲೇ ನನ್ನ ನೆಮ್ಮದಿ ಮತ್ತು ಜೀವನ ಹಾಳಾಯಿತು” ಎಂದು ಕೂಗಾಡಿದ್ದಾನೆ ಎನ್ನಲಾಗಿದೆ.
ಬಳಿಕ ಹೊರಳು ಕಲ್ಲಿನಿಂದ ಪತ್ನಿಯ ತಲೆಗೆ ಹೊಡೆದು, ರಕ್ತಸ್ರಾವವಾಗುತ್ತಿದ್ದ ಆಕೆಯನ್ನು ಬಾತ್ರೂಮ್ಗೆ ಎಳೆದೊಯ್ದಿದ್ದಾನೆ. ಅಲ್ಲಿಯೂ ಕಾಲಿನಿಂದ ಒದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಖಚಿತಪಡಿಸಿಕೊಳ್ಳುವವರೆಗೂ ಪಕ್ಕದಲ್ಲೇ ನಿಂತಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ವಿವರಗಳು
ಈ ಕೃತ್ಯ ನಡೆಯುತ್ತಿದ್ದಾಗ ಮನೆಯಲ್ಲಿದ್ದ ಅಪ್ರಾಪ್ತ ಮಗಳು ಯಾವುದೇ ಕಣ್ಣೀರು ಹಾಕದೆ, ತಾಯಿಯ ಮೃತದೇಹವನ್ನು ಕಟ್ಟಲು ತಂದೆಗೆ ಸೀರೆ ಮತ್ತು ಬೆಡ್ಶೀಟ್ ತಂದುಕೊಟ್ಟಿದ್ದಳು ಎನ್ನಲಾಗಿದೆ. ಬಳಿಕ ಮೃತದೇಹಗಳನ್ನು ಮೇಲಿನಿಂದ ಎಳೆದು ತಂದ ಆರೋಪಿ, ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಏಳು ಜನರ ಕೊಲೆ ಮಾಡಿದ ಬಳಿಕ ಇಂದುಶೇಖರ್ಗೆ ಮೃತರ ಆತ್ಮಗಳು ಕಾಡಬಹುದು ಎಂಬ ಭಯ ಶುರುವಾಗಿತ್ತು ಎನ್ನಲಾಗಿದೆ. ಕೊಲೆಯಾದವರು ಆತ್ಮವಾಗಿ ಬಂದು ತೊಂದರೆ ಕೊಡುತ್ತಾರೆ ಎಂದು ಹೆದರಿ ಇಡೀ ರಾತ್ರಿ ನಿದ್ದೆ ಮಾಡದೆ ಮನೆಯೊಳಗೆ ಓಡಾಡುತ್ತಾ ದೇವರ ನಾಮಸ್ಮರಣೆ ಮಾಡಿದ್ದಾನೆ.
ಮನೆಯಲ್ಲಿರಲು ಸಾಧ್ಯವಾಗದೆ ಹೊರಗೆ ಸುತ್ತಾಡುತ್ತಿದ್ದ ಆತನಿಗೆ ಅಪ್ರಾಪ್ತ ಮಗಳೇ ಧೈರ್ಯ ತುಂಬಿದ್ದಳು ಎನ್ನಲಾಗಿದೆ. ಬಳಿಕ ತಂದೆ ಮತ್ತು ಮಗಳು ಸೇರಿ ಮನೆಯ ಸಮೀಪದ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ.
ಸದ್ಯ ಪೊಲೀಸರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಮುಂದೆ ಇಂಗ್ಲಿಷ್ನಲ್ಲಿ ಮಾತನಾಡುತ್ತಿರುವ ಇಂದುಶೇಖರ್, ಆಗಾಗ್ಗೆ ‘ಬಿಪಿ ಹೆಚ್ಚಾಗಿದೆ’, ‘ತಲೆ ಸುತ್ತುತ್ತಿದೆ’, ‘ಐ ನೀಡ್ ರೆಸ್ಟ್’ ಎಂದು ಹೇಳುತ್ತಾ ವಿಶ್ರಾಂತಿ ಕೇಳುತ್ತಿದ್ದಾನೆ ಎನ್ನಲಾಗಿದೆ. ಈ ಮೂಲಕ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾನೆಯೇ ಎಂಬುದರ ಬಗ್ಗೆಯೂ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಏಳು ಜನರ ಹತ್ಯೆಯ ಬಳಿಕ ಆರೋಪಿಯ ವರ್ತನೆ, ಆತ್ಮಗಳ ಭಯ ಮತ್ತು ವಿಚಾರಣೆ ವೇಳೆ ನಡೆದುಕೊಳ್ಳುತ್ತಿರುವ ರೀತಿ ಪ್ರಕರಣದ ತನಿಖೆಯಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.




