Kannada NewsKarnataka NewsPolitics

*ಭದ್ರಾ ಮೇಲ್ದಂಡೆ ಯೋಜನೆಗೆ ಬಿಜೆಪಿಯವರು ₹5300 ಕೋಟಿ ಅನುದಾನ ಕೊಡಿಸಲಿ*: *ಸಿಎಂ ಡಿ.ಕೆ.ಶಿವಕುಮಾರ್ ಆಗ್ರಹ*

ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ಹೆಚ್ಚಿನ ಅನುದಾನ: ಸಿಎಂ ಡಿ ಕೆ ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ: “ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ 2 ಸಾವಿರ ಕೋಟಿಗೂ ಹೆಚ್ಚಿನ ಅನುದಾನವನ್ನ ಕೊಟ್ಟಿದ್ದೇವೆ. 3 ಸಾವಿರ ಮನೆಗಳನ್ನ ಮಂಜೂರಾತಿ ಮಾಡಿದ್ದೇವೆ. 1087 ಎಕರೆ ಜಮೀನು ಗುರುತಿಸಲಾಗಿದ್ದು, ಇದರ ಮೂಲಕ 17,434 ನಿವೇಶನಗಳ ಹಂಚಿಕೆ ಮಾಡಲಾಗುತ್ತದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಹಿರಿಯೂರಿನಲ್ಲಿ ಶನಿವಾರ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ಹಿರಿಯೂರಿನ ಹಾಗೂ ಈ ನಾಡಿನ ಜನತೆಯ ಪರವಾಗಿ ದಳ, ಬಿಜೆಪಿಯವರು ಒಂದೇ ಒಂದು ಜನಪರ ಯೋಜನೆಗಳನ್ನು ಮಾಡಿದ್ದಾರೆಯೇ? ಅವರುಗಳು ನಿಮ್ಮ‌ ಮನೆ ಬಾಗಿಲಿಗೆ ಬಂದರೆ ಬಹಿಷ್ಕಾರ ಹಾಕಿ.‌ ಇಷ್ಟೊಂದು ಯೋಜನೆಗಳನ್ನು ದಳ, ಬಿಜೆಪಿಯವರು ಕೊಟ್ಟಿದ್ದಾರೆಯೆ? ಕಾಂಗ್ರೆಸ್ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದು ಅನುಕೂಲ ಮಾಡಿಕೊಟ್ಟಿದೆ” ಎಂದು ಹೇಳಿದರು.

ಬಿಜೆಪಿಯವರು ಭದ್ರಾ ಮೇಲ್ದಂಡೆ ಯೋಜನೆ ₹5300 ಕೋಟಿ ಅನುದಾನ ಕೊಡಿಸಲಿ

“ಜನರಿಗೆ ದಳ ಹಾಗೂ ಬಿಜೆಪಿ‌ ಮೇಲೆ ವಿಶ್ವಾಸ ಇಲ್ಲ. ನಮ್ಮ‌ ಜನ ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರ ಮಕ್ಕಳನ್ನ ಸೋಲಿಸಿದರು. ಸಂಸದ ಗೋವಿಂದ ಕಾರಜೋಳ ಅವರು ಒಬ್ಬ ರೈತನಿಗೆ ಸಹಾಯ ಮಾಡಿದ್ದಾರೆಯೇ? ಬಿಜೆಪಿಯವರೇ ಮೊದಲು ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5,300 ಕೋಟಿ ರೂ. ಅನುದಾನವನ್ನ ಬಿಡುಗಡೆ ಮಾಡಿಸಿ” ಎಂದು ಸವಾಲು ಹಾಕಿದರು.

“ಹಿರಿಯೂರಿಗೆ ಭದ್ರಾ ಮೇಲ್ದಂಡೆ ನೀರನ್ನು ಹರಿಸುತ್ತಿದ್ದೀವಿ. ಬರವನ್ನು ದೂರ ಮಾಡಿದ್ದೇವೆ. ಐದು ಗ್ಯಾರಂಟಿಗಳ ಜೊತೆಗೆ ಭೂ ಗ್ಯಾರಂಟಿ, ನೀರಿನ ಗ್ಯಾರಂಟಿಯ ಜೊತೆಗೆ ಬದುಕಿನ ಗ್ಯಾರಂಟಿ ನೀಡಿದ್ದೇವೆ. ಇಷ್ಟೆಲ್ಲಾ ಕೊಡುಗೆ ನೀಡಿರುವ ನನಗೆ ಹಿರಿಯೂರಿನ ಜನತೆ ಕೂಲಿ ನೀಡಿ ಆಶೀರ್ವಾದ ಮಾಡಬೇಕು. ಅಭಿವೃದ್ಧಿಯ ಪ್ರಗತಿಯ ಲಕ್ಷ್ಮಿ ಹಿರಿಯೂರು ಕ್ಷೇತ್ರಕ್ಕೆ ಕಾಲಿಟ್ಟಿದ್ದಾಳೆ. ಇಂತಹ ಅದೃಷ್ಟ ಲಕ್ಷ್ಮಿಯನ್ನು ಉಳಿಸಿಕೊಳ್ಳೋದು ನಿಮಗೆ ಬಿಟ್ಟಿದ್ದು” ಎಂದು ಮನವಿ ಮಾಡಿದರು.

ಮಹಿಳೆಯರ ಹೆಸರಿಗೆ ನಿವೇಶನ

“ಹೆಣ್ಣು ಕುಟುಂಬದ ಕಣ್ಣು ಈ ಕಾರಣಕ್ಕಾಗಿ ಮಹಿಳೆಯರ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. 30/40 ಅಳತೆಯ ನಿವೇಶನಗಳನ್ನು ಕುಟುಂಬದ ಮಹಿಳೆಯರ ಹೆಸರಿಗೆ ನೀಡಲಾಗುತ್ತದೆ” ಎಂದು ಹೇಳಿದರು.

“ನಾನು ಕಳೆದ ಬಾರಿ ಬಂದಾಗಲೇ ಹೇಳಿದ್ದೆ. ನನಗೆ ಕನಕಪುರ ಬೇರೆ ಅಲ್ಲ. ಹಿರಿಯೂರು ಬೇರೆ ಅಲ್ಲ ಅಂತ. ಈ ಹಿರಿಯೂರು ನನ್ನ ಹಿರಿಯಣ್ಣ, ನನ್ನ ಹಿತೈಷಿ, ನನ್ನ ಹಿತಚಿಂತಕ, ನನ್ನ ಗೆಳೆಯ ಸುಧಾಕರ್ ಕ್ಷೇತ್ರ. ಸುಧಾಕರ್ ಕಂಡ ಕನಸುಗಳು ನಿಂತು ಹೋಗಬಾರದು ಅನ್ನೋ ಕಾರಣಕ್ಕೆ ಹಿರಿಯೂರಿಗೆ ಬಂದಿದ್ದೇ‌ನೆ. ಗೆಳೆಯನ ಆತ್ಮಕ್ಕೆ ಶಾಂತಿ ಕೋರಲು ಬಂದಿದ್ದೇನೆ” ಎಂದರು.

ಚಿತ್ರದುರ್ಗದ 2900 ಅರ್ಜಿಗಳಿಗೆ ಪರಿಹಾರ

“ಚಿತ್ರದುರ್ಗ ಜಿಲ್ಲೆಯಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಪ್ರಜಾಸೇವೆ‌ ಇಲಾಖೆಯಿಂದ 3,737 ಅರ್ಜಿ ಸ್ವೀಕಾರ ಮಾಡಲಾಗಿತ್ತು. ಇದ್ರಲ್ಲಿ 2900 ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ. ಇದು ನಮ್ಮ ಬದ್ದತೆ. ನಮಗಾಗಿ ಬದುಕುವುದು ಬರೀ ಜೀವನ, ಜನರಿಗಾಗಿ ಬದುಕುವುದು ಶ್ರೇಷ್ಠ ಜೀವನ. ಪ್ರಜಾಸೇವೆ ಅಂದರೆ ದಾನ- ಧರ್ಮ ಅಲ್ಲ. ಪ್ರಜಾಸೇವೆ ಎಂದರೆ ಬದುಕಿನ ಹೊಣೆಗಾರಿಕೆ. ಸತ್ಯ, ಶಿಸ್ತು, ನೀತಿ, ಪ್ರಾಮಾಣಿಕತೆಯೇ ಪ್ರಜಾಸೇವೆ” ಎಂದು ತಿಳಿಸಿದರು.

“ಜನರ ಸಂಕಷ್ಟಕ್ಕೆ ನೆರವಾಗೋದೇ ಜಗತ್ತಿನ ಶ್ರೇಷ್ಠ ಧರ್ಮ. ಮರ ತಾನು ಕೊಡೋ ಹಣ್ಣನ್ನ ತಾನೇ ತಿನ್ನಲ್ಲ.ಹರಿಯೋ ನದಿ ನೀರು ಕುಡಿಯಲ್ಲ. ನಮ್ಮ ಬದುಕಿನಲ್ಲಿನ ಸೇವೆ ಇರಬೇಕು” ಎಂದು ಹೇಳಿದರು.

“ನಮ್ಮ ಸರ್ಕಾರ ರೈತರ 70 ವರ್ಷಗಳ ಕನಸನ್ನು ನನಸು ಮಾಡಿದ್ದೇವೆ. ನಿಜಲಿಂಗಪ್ಪ ಅವರು ಕಂಡ‌ ಭದ್ರಾ ಮೇಲ್ದಂಡೆ ಯೋಜನೆ ಕನಸನ್ನು ಎಸ್ ಎಂ‌ ಕೃಷ್ಣ ಜಾರಿಮಾಡಿದರು. ಛಲ ಬಿಡದೇ ಚಿತ್ರದುರ್ಗ ಜಿಲ್ಲೆಯ ಕೆರೆಗಳಿಗೆ ಭದ್ರಾ ಮೇಲ್ದಂಡೆ ‌ಯೋಜನೆಯಡಿ ನೀರು ಹರಿಸಲಾಗಿದೆ” ಎಂದರು.

“ನಾವು ಅಧಿಕಾರಕ್ಕೆ ಬಂದ ದಿನಾನೇ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡೋಕೆ ಒಪ್ಪಿಗೆ ನೀಡಿದ್ವಿ. ಈಗ ಯೋಜನೆ ಸರಿಯಾಗಿ ತಲುಪುತ್ತಿದೆಯೋ ಇಲ್ಲವೋ ಎಂದು ಪರಿಶೀಲನೆ ಮಾಡಲಾಗುತ್ತಿದೆ. ಗೃಹಜ್ಯೋತಿ ಪರಿಶೀಲನೆ ನಡೆಯುತ್ತಿದೆ. ಗೃಹಲಕ್ಷ್ಮಿ ಪರಿಶೀಲನೆ ಮಾಡಲಾಗುತ್ತದೆ” ಎಂದರು.

“ಕಮಲಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ, ಈ ದಾನ ಧರ್ಮ‌ ಮಾಡೋ ಕೈ ಅಧಿಕಾರದಲ್ಲಿ ಇದ್ದರೆ ಚಂದ. ಅಮ್ಮನ ನೆನಪು ಪ್ರೀತಿಯ ಮೂಲ.‌ ದೇವರ ನೆನಪು ಭಕ್ತಿಯ ಮೂಲ. ಆದ ಕಾರಣ ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಿ ಎಂದು ಹೇಳಿದ್ದೇನೆ” ಎಂದು ತಿಳಿಸಿದರು.

16 ಕೆರೆಗಳ ಭರ್ತಿಗೆ 244 ಕೋಟಿ ರೂ. ನೀಡಿದ್ದೇವೆ

“ವಿಶ್ವೇಶ್ವರಯ್ಯ ಜಲ ನಿಗಮದ ಅಡಿ ಭದ್ರಾ ಮೇಲ್ದಂಡೆಯಿಂದ 1,742 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುತ್ತಿದ್ದೇವೆ. ಸಣ್ಣ ನೀರಾವರಿ ಇಲಾಖೆಯ 16 ಕೆರೆಗಳನ್ನ ತುಂಬಿಸೋಕೆ 244 ಕೋಟಿ ಕೊಟ್ಟಿದ್ದೇವೆ. ಕಳೆದ ತಿಂಗಳು ಐತಿಹಾಸಿಕ ಗೋನೂರು ಕೆರೆ ತುಂಬಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. 4 ಜಿಲ್ಲೆಗಳ, 13 ತಾಲ್ಲೂಕುಗಳ 367 ಕೆರೆಗಳತ್ತ ಭದ್ರಾ ಹೆಜ್ಜೆ ಹಾಕುತ್ತಿದೆ. ಸುಮಾರು 74.26 ಲಕ್ಷ‌ ಜನರಿಗೆ ಅನುಕೂಲವಾಗುಗುತ್ತದೆ” ಎಂದರು.

“ಹಿರಿಯೂರು ನಗರದ ದಕ್ಷಿಣ ಭಾಗಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಹಂತ-1ರ ರೂ. 100.00 ಕೋಟಿ ಮೊತ್ತದ ಯೋಜನೆ ಶಂಕುಸ್ಥಾಪನೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳ ಒದಗಿಸಲು ರೂ. 50.00 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲಾಗಿದೆ. ಜತೆಗೆ ಹಿರಿಯೂರು ಪಟ್ಟಣದಲ್ಲಿ ರೂ. 12.65 ಕೋಟಿ ವೆಚ್ಚದಲ್ಲಿ ಡಾ.ಬಾಬು ಜಗಜೀವನ ರಾಂ/ಛಲವಾದಿ ಭವನ /ಭೋವಿ ಭವನ ನಿರ್ಮಾಣ ಮಾಡಲಾಗುವುದು” ಎಂದರು.

“ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡಗಳ ಕಾಲೋನಿಗಳಲ್ಲಿ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರೂ. 10.00 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿರಿಯೂರು ನಗರದಲ್ಲಿ ರೂ. 5.00 ಕೋಟಿ ವೆಚ್ಚದಲ್ಲಿ ಒಕ್ಕಲಿಗರ ಭವನ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಮತ್ತು ಯುಜಿಡಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ” ಎಂದು ತಿಳಿಸಿದರು.

“ಧರ್ಮಪುರ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಕಾಮಗಾರಿ ಶಂಕುಸ್ಥಾಪನೆ ಮಾಡಲಾಗಿದ್ದು, ಹಿರಿಯೂರು ವಿಧಾನಸಭಾ ಕ್ಷೇತ್ರದ ವ್ಯಕ್ತಿಯ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಧಾರ್ಮಿಕ ಕ್ಷೇತ್ರ / ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ರೂ.10.00 ಕೋಟಿ ಅನುದಾನ ನೀಡಲಾಗಿದೆ. 2026-27 ನೇ ಸಾಲಿನ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ವಿವಿಧ ಇಲಾಖೆಗಳಿಗೆ ರೂ.20.00 ಕೋಟಿ ಅನುದಾನ ನೀಡಲಾಗಿದೆ” ಎಂದು ವಿವರಿಸಿದರು.

Related Articles

Back to top button