*ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಬೇಡ*; *ಅಸಮಾಧಾನ ವ್ಯಕ್ತಪಡಿಸಿದ ತನ್ವೀರ್ ಸೇಠ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ನಿಗಮ-ಮಂಡಳಿ ಹಾಗೂ ಪ್ರಮುಖ ಹುದ್ದೆಗಳ ನೇಮಕಾತಿ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಅಸಮಾಧಾನ ಆರಂಭವಾಗಿದೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಶಾಸಕ ತನ್ವೀರ್ ಸೇಠ್ ಅವರನ್ನು ನೇಮಕ ಮಾಡಲಾಗಿದೆ. ಆದರೆ ತನ್ವೀರ್ ಸೇಠ್ ತಮಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಬೇಡ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ತನ್ವೀರ್ ಸೇಠ್, ನನಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ ಸೂಕ್ತವಲ್ಲ. ಅದು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹುದ್ದೆಯಲ್ಲ. ಈ ಹುದ್ದೆಯಿಂದ ನನಗೆ ತೃಪ್ತಿಯಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನವೆಂಬರ್ 21ರಂದು ರಾಜ್ಯದ 18 ಪ್ರಮುಖ ನಾಯಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಗಳು, ಸರ್ಕಾರಿ ಮುಖ್ಯ ಸಚೇತಕ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಗಳನ್ನು ಹಂಚಿಕೆ ಮಾಡಿದೆ. ಈ ಪಟ್ಟಿಯಲ್ಲಿ ತನ್ವೀರ್ ಸೇಠ್ ಅವರಿಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಆದರೆ ಈ ನೇಮಕಾತಿ ಕುರಿತು ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಅವರಿಗೆ ರಾಜಕೀಯವಾಗಿ ಶಕ್ತಿ ತುಂಬುವ ಕೆಲಸವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ನನ್ನ ಹಿರಿತನಕ್ಕೆ ತಕ್ಕ ಸ್ಥಾನವನ್ನು ಕಲ್ಪಿಸುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ ಎಂಬ ಮಾಹಿತಿ ಬಂದಿದೆ. ಈ ಹುದ್ದೆ ನನಗೆ ಸೂಕ್ತವಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಹಿಂದೆ ಕೂಡ ಈ ಹುದ್ದೆ ಬೇಡ ಎಂದು ತಿಳಿಸಿದ್ದೆ. ಆದರೆ ಈವರೆಗೆ ಮುಖ್ಯಮಂತ್ರಿ ಕಚೇರಿಯಿಂದ ಯಾವುದೇ ಕರೆ ಬಂದಿಲ್ಲ. ಹೀಗಾಗಿ ಸಿಎಂ ಏನು ಹೇಳುತ್ತಾರೆ ಎಂಬುದನ್ನು ನೋಡಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಉಳಿದಿರುವ ಮೂರು ಸಚಿವ ಸ್ಥಾನಗಳಲ್ಲಿ ನನ್ನ ಕೋಟಾ ಇಲ್ಲ. ಹೀಗಾಗಿ ಸಚಿವ ಸ್ಥಾನವನ್ನು ಕೇಳುವುದಿಲ್ಲ ಎಂದಿರುವ ತನ್ವೀರ್ ಸೇಠ್, ನನ್ನ ಸಿದ್ಧಾಂತಕ್ಕೆ ಒಪ್ಪಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಸಿಕ್ಕಿದ್ದಕ್ಕೂ, ಸಿಗದೇ ಇರುವುದಕ್ಕೂ ತೃಪ್ತಿಯಿದೆ ಎಂದು ಹೇಳಿದ್ದಾರೆ.
ಹೊಸ ಸಂಪುಟ ರಚನೆಯಾದ ಬಳಿಕದಿಂದಲೂ ಮುಖ್ಯಮಂತ್ರಿ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿಲ್ಲ. ಸಿಎಂ ಕರೆದು ಮಾತನಾಡಿಸಿದರೆ ಖಂಡಿತಾ ಚರ್ಚಿಸುತ್ತೇನೆ. ಅವರೊಂದಿಗೆ ಮಾತುಕತೆ ನಡೆಸಿದ ಬಳಿಕವೇ ರಾಜಕೀಯ ಕಾರ್ಯದರ್ಶಿ ಹುದ್ದೆ ಸ್ವೀಕರಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತೇನೆ ಎಂದು ತಿಳಿಸಿದ್ದಾರೆ.




