*ಸ್ವಂತ ಮನೆಗೆ ಹೋಗಲೂ ಶರ್ಮಿಳಾಗೆ ಅಡ್ಡಿ*: *ಏರ್ಫೋರ್ಸ್ ಕ್ರಾಸ್ ಬಳಿ ಪೊಲೀಸರ ತಡೆ, ಭಾರೀ ಹೈಡ್ರಾಮಾ*

ಪ್ರಗತಿವಾಹಿನಿ ಸುದ್ದಿ: ಕುಟುಂಬದ ಆಸ್ತಿ ವಿವಾದ ಈಗ ಬೀದಿಗೆ ಬಂದಿದ್ದು, ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರಿಗೆ ತಮ್ಮ ಕುಟುಂಬದ ಮನೆಗೆ ಪ್ರವೇಶಿಸಲು ಸಾಧ್ಯವಾಗದ ಘಟನೆ ನಡೆದಿದೆ. ತಾಯಿ, ಮಗ ಮತ್ತು ಸೊಸೆಯೊಂದಿಗೆ ಬೆಂಗಳೂರಿಗೆ ಬಂದಿದ್ದ ಶರ್ಮಿಳಾ ಅವರನ್ನು ಪೊಲೀಸರು ಮಾರ್ಗಮಧ್ಯೆಯೇ ತಡೆದಿದ್ದಾರೆ. ಇದರಿಂದ ಶರ್ಮಿಳಾ ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿದೆ. “ನನ್ನ ಸ್ವಂತ ಮನೆಗೆ ಹೋಗುವುದರಲ್ಲಿ ಏನು ತಪ್ಪಿದೆ?” ಎಂದು ಪೊಲೀಸರನ್ನೇ ಪ್ರಶ್ನಿಸಿದ ಶರ್ಮಿಳಾ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮ್ಮ ತಾಯಿ ವೈ.ಎಸ್. ವಿಜಯಮ್ಮ, ಮಗ ರಾಜಾ ರೆಡ್ಡಿ ಮತ್ತು ಸೊಸೆ ಪ್ರಿಯಾ ಅತ್ಲೂರಿ ಅವರೊಂದಿಗೆ ಶರ್ಮಿಳಾ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ಯಲಹಂಕದಲ್ಲಿರುವ ಕುಟುಂಬದ ನಿವಾಸಕ್ಕೆ ತೆರಳುತ್ತಿದ್ದ ವೇಳೆ, ಬೆಂಗಳೂರಿನ ಏರ್ಫೋರ್ಸ್ ಕ್ರಾಸ್ ಬಳಿ ಪೊಲೀಸರು ಅವರ ವಾಹನಗಳನ್ನು ತಡೆದಿದ್ದಾರೆ.
ಶರ್ಮಿಳಾ ಭೇಟಿ ತಡೆದಿದ್ದೇಕೆ?
ಯಲಹಂಕದಲ್ಲಿರುವ ಕುಟುಂಬದ ನಿವಾಸಕ್ಕೆ ಪ್ರವೇಶಿಸದಂತೆ ನ್ಯಾಯಾಲಯದ ಮಧ್ಯಂತರ ಆದೇಶವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಶರ್ಮಿಳಾ, “ನನ್ನ ಸ್ವಂತ ಮನೆಗೆ ಹೋಗುವುದರಲ್ಲಿ ಏನು ತಪ್ಪಿದೆ? ನೀವು ನನ್ನನ್ನು ಏಕೆ ತಡೆಯುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪೊಲೀಸರು ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ. ಬಳಿಕ ಶರ್ಮಿಳಾ ಅಲ್ಲಿಂದ ತೆರಳಿ ನಗರದ ಖಾಸಗಿ ಹೋಟೆಲ್ಗೆ ಹೋಗಿದ್ದಾರೆ ಎಂದು ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಜಿ.ಕೆ. ಮಿಥುನ್ ಕುಮಾರ್, ನ್ಯಾಯಾಲಯದ ಆದೇಶದಂತೆ ಶಾಶ್ವತ ತಡೆಯಾಜ್ಞೆ ಇರುವುದರಿಂದ ಶರ್ಮಿಳಾ ಅವರನ್ನು ತಡೆಯಲಾಗಿದೆ. ಆದೇಶದ ಬಗ್ಗೆ ತಿಳಿಸಿದ ತಕ್ಷಣ ಅವರು ಸ್ಥಳದಿಂದ ತೆರಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಏನಿದು ಆಸ್ತಿ ವಿವಾದ?
ದೇವನಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ನವೆಂಬರ್ 21ರಂದು ಮಧ್ಯಂತರ ತಡೆಯಾಜ್ಞೆ ನೀಡಿದೆ. ಅದರಂತೆ ಶರ್ಮಿಳಾ, ಅವರ ಕುಟುಂಬ ಸದಸ್ಯರು, ಏಜೆಂಟರು, ಪ್ರತಿನಿಧಿಗಳು ಅಥವಾ ಅವರ ಪರವಾಗಿ ಕಾರ್ಯನಿರ್ವಹಿಸುವ ಯಾರೂ ಸಿಲಿಕಾನ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ಗೆ ಸೇರಿದ ಆಸ್ತಿಯ ಸ್ವಾಧೀನದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಆದೇಶಿಸಲಾಗಿದೆ.
ಸಿಲಿಕಾನ್ ಬಿಲ್ಡರ್ಸ್ ಆರೋಪವೇನು?
ಸಿಲಿಕಾನ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಮೊಕದ್ದಮೆಯಲ್ಲಿ, ವಿವಾದಿತ ಆಸ್ತಿ ಗುತ್ತಿಗೆ ಒಪ್ಪಂದದ ಅಡಿಯಲ್ಲಿ ಕಂಪನಿಯ ಕಾನೂನುಬದ್ಧ ಸ್ವಾಧೀನದಲ್ಲಿದೆ ಎಂದು ಹೇಳಿಕೊಂಡಿದೆ. ಆದರೆ ಶರ್ಮಿಳಾ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಆಸ್ತಿಯ ಸ್ವಾಧೀನದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂಪನಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.




