Belagavi NewsBelgaum NewsKarnataka NewsLatest

*ಬೆಳಗಾವಿ ಅಧಿವೇಶನದಲ್ಲಿ ಕನ್ನಡಿಗರಿಗೆ ಉದ್ಯೋಗ ಮಸೂದೆ ಅಂಗೀಕರಿಸಬೇಕು*: *ರಾಜಕುಮಾರ್ ಟೋಪಣ್ಣವರ್ ಅಗ್ರಹ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಸ್ಥಳೀಯ ಕನ್ನಡ ಅಭ್ಯರ್ಥಿಗಳ ಉದ್ಯೋಗ ಮಸೂದೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಂಗೀಕರಿಸಬೇಕೆಂದು ಎಂದು ರಾಜಕುಮಾರ ಟೋಪಣ್ಣವರ ಹೇಳಿದರು.


ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 2024ರ ಜುಲೈ 15ರಂದು ಸಚಿವ ಸಂಪುಟ ಅನುಮೋದನೆ ನೀಡಿದ್ದ ಸ್ಥಳೀಯ ಉದ್ಯೋಗ ಮಸೂದೆ ಇನ್ನೂ ಜಾರಿಗೆ ಬಂದಿಲ್ಲ. ಕರ್ನಾಟಕದಲ್ಲಿ ಕೈಗಾರಿಕಾ ಘಟಕಗಳನ್ನು ಹೊಂದಿರುವ ಹಲವು ಕಂಪನಿಗಳು ಹೊರರಾಜ್ಯಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಆರೋಪಿಸಲಾಗಿದೆ.


ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ–ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು, ಐಟಿಐ ಹಾಗೂ ತಾಂತ್ರಿಕ ಶಿಕ್ಷಣ ಪಡೆದ ಯುವಕರಿದ್ದರೂ ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ಬದಲು ಕಂಪನಿಗಳು ಹೊರರಾಜ್ಯಗಳಲ್ಲಿ ನೇಮಕಾತಿ ಶಿಬಿರಗಳನ್ನು ನಡೆಸುತ್ತಿರುವುದು ಅನ್ಯಾಯವಾಗಿದೆ ಎಂದರು.


AISATS, ಶ್ನೈಡರ್ ಎಲೆಕ್ಟ್ರಿಕ್, ಕ್ವೆಸ್ಟ್ ಗ್ಲೋಬಲ್, ಟಿಸಿಎಸ್, ಫಾಕ್ಸ್‌ಕಾನ್, ಹೋಂಡಾ ಸೇರಿದಂತೆ ವಿವಿಧ ಕಂಪನಿಗಳು 2026ರಲ್ಲಿ ಹೊರರಾಜ್ಯಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಿರುವುದನ್ನು ಉಲ್ಲೇಖಿಸಿ, ಕರ್ನಾಟಕದಲ್ಲಿ ಘಟಕಗಳನ್ನು ಹೊಂದಿರುವ ಕಂಪನಿಗಳು ಸ್ಥಳೀಯ ಯುವಕರಿಗೂ ಸಮರ್ಪಕ ಉದ್ಯೋಗಾವಕಾಶ ನೀಡಬೇಕು ಎಂದು ಆಗ್ರಹಿಸಲಾಗಿದೆ.


ರಾಜ್ಯದ ಕೈಗಾರಿಕಾ ನೀತಿಯಲ್ಲಿ ಕನ್ನಡಿಗರಿಗೆ ಉದ್ಯೋಗ ಆದ್ಯತೆ ನೀಡುವ ನಿಯಮಗಳಿದ್ದರೂ ಅವುಗಳ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ. ಸರ್ಕಾರದಿಂದ ಭೂಮಿ, ಸಬ್ಸಿಡಿ ಹಾಗೂ ಇತರ ಸೌಲಭ್ಯಗಳನ್ನು ಪಡೆದ ಕೈಗಾರಿಕೆಗಳು ಕನ್ನಡಿಗರ ಉದ್ಯೋಗ ಪ್ರಮಾಣದ ವಾರ್ಷಿಕ ವರದಿ ಸಲ್ಲಿಸುವಂತೆ ಕಡ್ಡಾಯಗೊಳಿಸಬೇಕು. ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ತನಿಖೆ ನಡೆಸಿ, ಪಡೆದ ಸೌಲಭ್ಯಗಳನ್ನು ವಾಪಸ್ ಪಡೆಯುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಬೆಳಗಾವಿ ಹಾಗೂ ಹುಬ್ಬಳ್ಳಿ, ಧಾರವಾಡದಲ್ಲಿ ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸುವಲ್ಲಿ ಸರ್ಕಾರ ವಿಫಲವಾಗಿದೆ. ಬೆಳಗಾವಿಯಲ್ಲಿ ಕೊನೆಯ ಬಾರಿಗೆ 2021ರಲ್ಲಿ ದೊಡ್ಡ ಮಟ್ಟದ ಉದ್ಯೋಗ ಮೇಳ ನಡೆದಿದ್ದು, ನಂತರ ಉತ್ತರ ಕರ್ನಾಟಕದ ಯುವಕರಿಗೆ ದೊಡ್ಡ ಕಂಪನಿಗಳ ಉದ್ಯೋಗಾವಕಾಶ ಕಲ್ಪಿಸುವಂತಹ ವಿಭಾಗೀಯ ಉದ್ಯೋಗ ಮೇಳಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಬೆಳಗಾವಿ ಮತ್ತು ಹುಬ್ಬಳ್ಳಿ–ಧಾರವಾಡದಲ್ಲಿ 2027ರ ಮಾರ್ಚ್ ಒಳಗಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಸಬೇಕು. ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಐಟಿಐಗಳಲ್ಲಿ ವಿಮಾನಯಾನ, ಎಲೆಕ್ಟ್ರಾನಿಕ್ಸ್, ವಾಹನ ತಯಾರಿಕೆ ಮತ್ತು ಎಲೆಕ್ಟ್ರಿಕ್ ವಾಹನ ಕ್ಷೇತ್ರಗಳಿಗೆ ಸಂಬಂಧಿಸಿದ ವಿಶೇಷ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಕಂಪನಿಗಳು ಕರ್ನಾಟಕದ ನಾಲ್ಕು ವಿಭಾಗಗಳಲ್ಲಿ ವಾರ್ಷಿಕ ನೇಮಕಾತಿ ಶಿಬಿರ ನಡೆಸುವಂತೆ ಸೂಚಿಸಬೇಕು ಎಂದರು.


ಬೆಳಗಾವಿ ಅಧಿವೇಶನದಲ್ಲಿ ಸ್ಥಳೀಯ ಉದ್ಯೋಗ ಮಸೂದೆ ಅಂಗೀಕರಿಸಿ, ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಕಾನೂನು ಜಾರಿಗೆ ತರಬೇಕು. ಉತ್ತರ ಕರ್ನಾಟಕದ ಯುವಕರ ಉದ್ಯೋಗ ಸಮಸ್ಯೆಗೆ ಸರ್ಕಾರ ಗಂಭೀರವಾಗಿ ಸ್ಪಂದಿಸಿ, ಮುಖ್ಯಮಂತ್ರಿ ನೀಡಿರುವ ಭರವಸೆಯನ್ನು ಕಾನೂನಿನ ರೂಪದಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

Related Articles

Back to top button