*ಜೈನ್ ಹೆರಿಟೇಜ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಗೌರವ*; *ಶಿಸ್ತು, ಆತ್ಮವಿಶ್ವಾಸವೇ ಯಶಸ್ಸಿನ ಮಂತ್ರ*: *ಮಹಾಂತೇಶ ಹೊಸಪೇಟಿ*

ಪ್ರಗತಿವಾಹಿನಿ ಸುದ್ಸಿ, ಬೆಳಗಾವಿ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಬಾಲ್ಯದಿಂದಲೇ ಶಿಸ್ತು, ದೃಢಸಂಕಲ್ಪ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ ವಿ. ಹೊಸಪೇಟಿ ಕರೆ ನೀಡಿದರು.
ನಗರದ ಜೈನ್ ಹೆರಿಟೇಜ್ ಶಾಲೆಯಲ್ಲಿ ಗ್ರೇಡ್ 1 ಮತ್ತು 2ರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ ಅವರು, ಬಾಲ್ಯದಲ್ಲಿಯೇ ಶಿಸ್ತು ಮತ್ತು ಪರಿಶ್ರಮದ ಗುಣಗಳನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಂದು ಸಾಧನೆಯ ಹಿಂದೆಯೂ ನಿರಂತರ ಪ್ರಯತ್ನ ಹಾಗೂ ಆತ್ಮವಿಶ್ವಾಸ ಇರುತ್ತದೆ. ವಿದ್ಯಾರ್ಥಿಗಳು ಯಾವುದೇ ಸವಾಲು ಎದುರಾದರೂ ಧೈರ್ಯದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕಿ ಶ್ರದ್ಧಾ ಖಟವಟೆ ಹಾಗೂ ಮುಖ್ಯ ಆಡಳಿತಾಧಿಕಾರಿ ಅಮೀ ದೋಷಿ ಉಪಸ್ಥಿತರಿದ್ದು, ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಿದರು.



