HealthKannada NewsLatestLife Style

*ಜಾಹೀರಾತು ನೋಡಿ ಫೇಸ್ ಕ್ರೀಮ್ ಬಳಸುವ ಮುನ್ನ ಇರಲಿ ಎಚ್ಚರ*: *ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾದ 17 ವರ್ಷದ ಯುವತಿ*

ಪ್ರಗತಿವಾಹಿನಿ ಸುದ್ದಿ: ಯೂಟ್ಯೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಗಳಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ಪ್ರಚಾರ ನೋಡಿ ಫೇಸ್ ಕ್ರೀಮ್, ಫೇರ್ ನೆಸ್ ಕ್ರೀಮ್ ಗಳನ್ನು ಬಳಸುವ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ.

ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡುವ ಫೇಸ್ ಕ್ರೀಮ್ ನ್ನು ನಂಬಿದ 17 ವರ್ಷದ ಟೀನೇಜ್ ಯುವತಿಯೊಬ್ಬಳ ಸ್ಥಿತಿ ಈಗ ಗಂಭೀರವಾಗಿರುವ ಘಟನೆ ನಡೆದಿದೆ. ಜಾಹೀರಾತುಗಳಲ್ಲಿನ ಪ್ರಚಾರವನ್ನು ನೋಡಿ ನಂಬಿದ ಯುವತಿ ಸುಮಾರು ಒಂದು ವರ್ಷ ಫೇರ್ ನೆಸ್ ಕ್ರೀಮ್ ಬಳಸಿದ್ದು, ಇದೀಗ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುವಂತಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವ ಫೇಸ್ ಕ್ರೀಮ್ ಬಳಸಿದ ಮಂಗಳೂರಿನ 17 ವರ್ಷದ ಯುವತಿಯ ದೇಹದಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ ಪತ್ತೆಯಾಗಿದೆ. ಈ ಘಟನೆ ಆನ್‌ಲೈನ್ ಸೌಂದರ್ಯ ಉತ್ಪನ್ನಗಳ ಬಳಕೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಂಗಳೂರು ಮೂಲದ ಈಕೆ ಕೇರಳದ ಮಲಪ್ಪುರಂನಲ್ಲಿ ವಾಸವಾಗಿದ್ದಾಳೆ. 17 ವರ್ಷದ ಈಕೆ ಗಂಭೀರ ಕಿಡ್ನಿ ಕಾಯಿಲೆಗೆ ತುತ್ತಾಗಿದ್ದಾಳೆ. ಈ ಬಾಲಕಿ ಬಳಸುತ್ತಿದ್ದ ಫೇರ್‌ನೆಸ್ ಕ್ರೀಮ್ ಅನ್ನು ಪರೀಕ್ಷೆಗೆ ಒಳಪಡಿಸಿದಾಗ ಬರೋಬ್ಬರಿ 12,500 PPM ಪ್ರಮಾಣದ ಮರ್ಕ್ಯುರಿ (ಪಾದರಸ) ಅಂಶ ಪತ್ತೆಯಾಗಿದೆ. ಅಂದರೆ ಆಕೆ ಬಳಸುತ್ತಿದ್ದ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಪಾದರಸದ ಅನುಮತಿಸಲಾದ ಮಿತಿ 1 PPMಗಿಂತ ಕಡಿಮೆ ಎಂದು ತಿಳಿಸಲಾಗಿದೆ. ಅಂದರೆ, ಈ ಕ್ರೀಮ್‌ನಲ್ಲಿ ಪತ್ತೆಯಾದ ಪಾದರಸದ ಪ್ರಮಾಣ ಅನುಮತಿಸಲಾದ ಮಿತಿಗಿಂತ ಹಲವು ಪಟ್ಟು ಹೆಚ್ಚಾಗಿದೆ.

ಪಾದರಸದಂತಹ ವಿಷಕಾರಿ ಲೋಹಗಳು ದೇಹಕ್ಕೆ ಸೇರಿದರೆ ಮೂತ್ರಪಿಂಡಗಳ ಕಾರ್ಯನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಬಾಲಕಿಯ ಕಿಡ್ನಿಯ ಫಿಲ್ಟರಿಂಗ್ ಘಟಕಗಳಿಗೆ ಹಾನಿಯಾಗಿದ್ದು, ಮೆಂಬ್ರೇನಸ್ ನೆಫ್ರೋಪತಿ ಎಂಬ ಗಂಭೀರ ಕಾಯಿಲೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಾಲುಗಳಲ್ಲಿ ಊತ, ರಕ್ತದೊತ್ತಡದಲ್ಲಿ ಬದಲಾವಣೆ ಹಾಗೂ ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕೇರಳ ಸರ್ಕಾರ ತನಿಖೆಗೆ ಸೂಚನೆ ನೀಡಿದ್ದು, ಮಕ್ಕಳ ಹಕ್ಕುಗಳ ಆಯೋಗವೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಉತ್ಪನ್ನದ ಗುಣಮಟ್ಟ, ಅದರಲ್ಲಿರುವ ರಾಸಾಯನಿಕ ಅಂಶಗಳು ಹಾಗೂ ಜಾಹೀರಾತುಗಳ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಯಬೇಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಅಥವಾ ಇನ್‌ಫ್ಲುಯೆನ್ಸರ್‌ಗಳು ಪ್ರಚಾರ ಮಾಡುತ್ತಾರೆ ಎಂಬ ಕಾರಣಕ್ಕೆ ಯಾವುದೇ ಕ್ರೀಮ್ ಅಥವಾ ಸೌಂದರ್ಯವರ್ಧಕ ಉತ್ಪನ್ನವನ್ನು ಸುರಕ್ಷಿತವೆಂದು ಭಾವಿಸಬಾರದು. ಖರೀದಿಸುವ ಮೊದಲು ಉತ್ಪನ್ನದ ಲೇಬಲ್, ತಯಾರಕರ ವಿವರ, ಪದಾರ್ಥಗಳ ಪಟ್ಟಿ, ಪರವಾನಗಿ ಮತ್ತು ಮುಕ್ತಾಯ ದಿನಾಂಕ ಪರಿಶೀಲಿಸಬೇಕು. ಯಾವುದೇ ಫೇಸ್ ಕ್ರೀಮ್ ಅಥವಾ ಜಾಹೀರಾತು ನೋಡಿ ಯಾವುದನ್ನೇ ಖರೀದಿಸುವ ಮುನ್ನ ಎಚ್ಚರಿಕೆ ಇರಲಿ.

Related Articles

Back to top button