*ಸರ್ಕಾರಿ ಶಾಲಾ ಮಕ್ಕಳ ಊಟದ ತಟ್ಟೆಯಲ್ಲಿ ಮಹತ್ವದ ಬದಲಾವಣೆ?*: *ಶಿಕ್ಷಣ ಇಲಾಖೆಯಿಂದ ಹೊಸ ಚಿಂತನೆ*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಶಾಲಾ ಮಕ್ಕಳ ಮಧ್ಯಾಹ್ನದ ಊಟದ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಸಿದ್ಧತೆ ನಡೆಯುತ್ತಿದೆ. ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟದ ಜೊತೆಗೆ ಪೌಷ್ಟಿಕಾಂಶಕ್ಕೂ ಹೆಚ್ಚಿನ ಆದ್ಯತೆ ನೀಡಲು ಇಲಾಖೆ ಮುಂದಾಗಿದೆ. ಇದಕ್ಕಾಗಿ ವಿಶೇಷ ಪರಿಶೀಲನಾ ವ್ಯವಸ್ಥೆ ರೂಪಿಸುವ ಚಿಂತನೆ ನಡೆದಿದೆ. ಅಷ್ಟೇ ಅಲ್ಲ, ಮಕ್ಕಳ ತಟ್ಟೆಗೆ ಸ್ಥಳೀಯ ಆಹಾರ ಪದ್ಧತಿಯೂ ಸೇರುವ ಸಾಧ್ಯತೆಯಿದೆ.
ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಿಂದ 1,591 ಕೋಟಿ ರೂಪಾಯಿ ನೆರವು ದೊರೆತಿದೆ. ರಾಜ್ಯ ಸರ್ಕಾರವೂ ಸಾರ್ವಜನಿಕರ ತೆರಿಗೆ ಹಣವನ್ನು ಈ ಯೋಜನೆಗೆ ವೆಚ್ಚ ಮಾಡುತ್ತಿದೆ. ಹೀಗಾಗಿ ಮಕ್ಕಳಿಗೆ ವಿತರಿಸುವ ಆಹಾರ ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಪರಿಶೀಲಿಸಲು ವಿಶೇಷ ಆಡಿಟ್ ನಡೆಸುವ ಕುರಿತು ಚರ್ಚೆ ನಡೆದಿದೆ.
ಆಹಾರ ತಯಾರಿಕೆ, ವಿತರಣೆ, ಪೌಷ್ಟಿಕಾಂಶದ ಪ್ರಮಾಣ ಮತ್ತು ಮಕ್ಕಳಿಗೆ ಸಿಗುವ ಊಟದ ಗುಣಮಟ್ಟದ ಮೇಲೆ ನಿರಂತರ ನಿಗಾ ಇಡುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ. ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ನೀಡುವುದು ಸೇರಿದಂತೆ ಆಹಾರ ವಿತರಣೆಯಲ್ಲಿ ಎಲ್ಲ ಮಕ್ಕಳಿಗೂ ಸಮಾನತೆ ಕಾಪಾಡಲು ಇಲಾಖೆ ಒತ್ತು ನೀಡುತ್ತಿದೆ.
ಪ್ರಸ್ತುತ ವಾರದ ಮೆನ್ಯೂ ಪ್ರಕಾರ ಸೋಮವಾರದಿಂದ ಗುರುವಾರದವರೆಗೆ ವಿವಿಧ ತರಕಾರಿಗಳ ಸಾಂಬಾರು ನೀಡಲಾಗುತ್ತದೆ. ಶುಕ್ರವಾರ ಬಿಸಿಬೇಳೆ ಬಾತ್ ಹಾಗೂ ಶನಿವಾರ ಉಪ್ಪಿಟ್ಟು, ಗೋಧಿ ಪೊಂಗಲ್, ವಾಂಗಿಬಾತ್, ಚಪಾತಿ ಅಥವಾ ಪೂರಿ ಸಾಗು ವಿತರಿಸಲಾಗುತ್ತದೆ. ಇದರ ಜೊತೆಗೆ ವಾರದಲ್ಲಿ ಐದು ದಿನ 150 ಮಿ.ಲೀ. ಹಾಲು ನೀಡಲಾಗುತ್ತದೆ. ನಿಗದಿತ ದಿನಗಳಲ್ಲಿ ರಾಗಿ ಮಾಲ್ಟ್ ಹಾಗೂ ವಾರದ ಆರು ದಿನ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸಲಾಗುತ್ತದೆ.
ಇದೀಗ ತಜ್ಞರ ಸಲಹೆ ಆಧರಿಸಿ ಮೆನ್ಯೂನಲ್ಲಿ ಬದಲಾವಣೆ ತರಲು ಚಿಂತನೆ ನಡೆದಿದೆ. ಆಯಾ ಜಿಲ್ಲೆಗಳ ಆಹಾರ ಪದ್ಧತಿಗೆ ಅನುಗುಣವಾಗಿ ರಾಗಿ ಮುದ್ದೆ, ಜೋಳದ ರೊಟ್ಟಿಯಂತಹ ಪ್ರಾದೇಶಿಕ ಆಹಾರಗಳನ್ನು ಮಕ್ಕಳ ಊಟದಲ್ಲಿ ಸೇರಿಸುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.
ಈ ಕುರಿತು ಮಾತನಾಡಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಸಿಯೂಟದಲ್ಲಿ ಗುಣಮಟ್ಟದ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ. ಸಮಾನ ಶಿಕ್ಷಣದ ಜೊತೆಗೆ ಮಕ್ಕಳಿಗೆ ನೀಡುವ ಆಹಾರದಲ್ಲೂ ಸಮಾನತೆ ಇರಬೇಕು. ಆಹಾರದ ಗುಣಮಟ್ಟದ ಪರಿಶೀಲನೆ ನಿರಂತರವಾಗಿ ನಡೆಯಬೇಕು ಎಂದು ಅವರು ಹೇಳಿದ್ದಾರೆ.



