*ರಕ್ಷಣಾ ಇಲಾಖೆಯ ವಾಟ್ಸಾಪ್ ಗ್ರೂಪ್ಗಳ ಮೇಲೂ ಕಣ್ಣು*: *ಸರ್ಕಾರಿ ಸಿಬ್ಬಂದಿಗೆ ಕೇಂದ್ರದ ಸೈಬರ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ವಾಟ್ಸಾಪ್ ಬಳಕೆಯಲ್ಲೂ ಈಗ ಸರ್ಕಾರಿ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಪಾಕಿಸ್ತಾನ ಮೂಲದ ಗುಪ್ತಚರ ಕಾರ್ಯಕರ್ತರು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಗುಂಪುಗಳಿಗೆ ನುಸುಳಿರುವ ಶಂಕೆ ವ್ಯಕ್ತವಾಗಿದೆ. 50ಕ್ಕೂ ಹೆಚ್ಚು ವಾಟ್ಸಾಪ್ ಗುಂಪುಗಳ ಚಟುವಟಿಕೆಗಳ ಬಗ್ಗೆ ತನಿಖೆಯಲ್ಲಿ ಆತಂಕಕಾರಿ ಮಾಹಿತಿ ಹೊರಬಂದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯದ ಸೈಬರ್ ಭದ್ರತಾ ಸಂಸ್ಥೆ ಮಹತ್ವದ ಎಚ್ಚರಿಕೆ ನೀಡಿದೆ.
ಕೇಂದ್ರ ಗೃಹ ಸಚಿವಾಲಯದ ನೋಡಲ್ ಸೈಬರ್ ಭದ್ರತಾ ಸಂಸ್ಥೆಯಾದ ಇಂಡಿಯನ್ ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್ (ಐ4ಸಿ), ಸರ್ಕಾರಿ ಸಿಬ್ಬಂದಿಗೆ ವಾಟ್ಸಾಪ್ ವೆಬ್ ಸೆಷನ್ಗಳ ಮೂಲಕ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಸೂಚಿಸಿದೆ. ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ಗಳಲ್ಲಿ ವಾಟ್ಸಾಪ್ ವೆಬ್ ಅನ್ನು ಲಾಗಿನ್ ಆಗಿಯೇ ಬಿಡದಂತೆ ಎಚ್ಚರಿಕೆ ನೀಡಿದೆ.
ಐ4ಸಿ ಅಡಿಯ ನ್ಯಾಷನಲ್ ಸೈಬರ್ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯುನಿಟ್ (ಎನ್ಸಿಟಿಯು) ಪ್ರಕಾರ, ಸಕ್ರಿಯ ವಾಟ್ಸಾಪ್ ವೆಬ್ ಸೆಷನ್ಗಳನ್ನು ದುರುಪಯೋಗಪಡಿಸಿಕೊಂಡು ಬಳಕೆದಾರರ ಖಾತೆಗಳನ್ನು ವಂಚನೆ ಅಥವಾ ಫಿಶಿಂಗ್ಗಾಗಿ ನಿಯಂತ್ರಣಕ್ಕೆ ಪಡೆಯಬಹುದು. ದೃಢೀಕೃತ ವಾಟ್ಸಾಪ್ ವೆಬ್ ಸೆಷನ್ ಮೂಲಕ ಕೆಲವು ಸಂದರ್ಭಗಳಲ್ಲಿ ಅನಧಿಕೃತವಾಗಿ ಖಾತೆ ಪ್ರವೇಶಿಸಲು ಸಾಧ್ಯವಿದೆ.
ಇಂತಹ ಪ್ರವೇಶ ಪಡೆದ ದುರುದ್ದೇಶಪೂರಿತ ವ್ಯಕ್ತಿಗಳು ಸಂದೇಶಗಳನ್ನು ಓದಬಹುದು. ಖಾತೆದಾರರ ಹೆಸರಿನಲ್ಲಿ ಇತರರಿಗೆ ಸಂದೇಶ ಕಳುಹಿಸಬಹುದು. ಸಂಪರ್ಕಗಳು ಮತ್ತು ಗುಂಪುಗಳ ಸಂಭಾಷಣೆಗಳನ್ನು ನೋಡಬಹುದು. ಅಲ್ಲದೆ, ವಂಚನೆ, ಫಿಶಿಂಗ್ ಮತ್ತು ಸೋಶಿಯಲ್ ಎಂಜಿನಿಯರಿಂಗ್ ಸೇರಿದಂತೆ ವಿವಿಧ ದುರುದ್ದೇಶಪೂರಿತ ಚಟುವಟಿಕೆಗಳಿಗೆ ಖಾತೆದಾರರ ವಿಶ್ವಾಸಾರ್ಹ ಗುರುತನ್ನು ಬಳಸಿಕೊಳ್ಳಬಹುದು ಎಂದು ಐ4ಸಿ ಎಚ್ಚರಿಸಿದೆ.
ತನಿಖೆಯ ಪ್ರಕಾರ, ಪಾಕಿಸ್ತಾನ ಮೂಲದ ಗುಪ್ತಚರ ಕಾರ್ಯಕರ್ತರು ನಕಲಿ ಭಾರತೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿ ರಕ್ಷಣಾ ಸಂಬಂಧಿತ ವಾಟ್ಸಾಪ್ ಗುಂಪುಗಳಿಗೆ ‘ನಿಷ್ಕ್ರಿಯ ಸದಸ್ಯರಾಗಿ’ ಸೇರಿಕೊಂಡಿದ್ದರು. ಯಾರ ಗಮನಕ್ಕೂ ಬಾರದಂತೆ ಗುಂಪುಗಳಲ್ಲಿನ ಸಂಭಾಷಣೆಗಳನ್ನು ಗಮನಿಸುತ್ತಿದ್ದರು ಎನ್ನಲಾಗಿದೆ. ಎನ್ಎಸ್ಜಿ, ಸಿಆರ್ಪಿಎಫ್, ಕಮಾಂಡೋಗಳು ಮತ್ತು ಡಿಆರ್ಡಿಒಗೆ ಸಂಬಂಧಿಸಿದ ಗುಂಪುಗಳೂ ಈ ಪಟ್ಟಿಯಲ್ಲಿವೆ. ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಗುಂಪುಗಳಲ್ಲಿರುವ ಅಪರಿಶೀಲಿತ ಸದಸ್ಯರನ್ನು ಗುರುತಿಸಿ ತೆಗೆದುಹಾಕಲು ಭಾರತೀಯ ಭದ್ರತಾ ಸಂಸ್ಥೆಗಳು ಆಡಿಟ್ ನಡೆಸುವಂತೆ ಸೂಚಿಸಿವೆ.
ಕಚೇರಿ ಕಂಪ್ಯೂಟರ್ಗಳು, ಹಂಚಿಕೆಯ ವ್ಯವಸ್ಥೆಗಳು, ಸಾರ್ವಜನಿಕ ಕಂಪ್ಯೂಟರ್ಗಳು ಅಥವಾ ಇತರರಿಗೆ ಲಭ್ಯವಿರುವ ಸಾಧನಗಳಲ್ಲಿ ವಾಟ್ಸಾಪ್ ವೆಬ್ ಬಳಸುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ಪ್ರತಿಯೊಂದು ಬಳಕೆಯ ನಂತರ ಲಾಗ್ ಔಟ್ ಆಗಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಇನ್ಕಾಗ್ನಿಟೊ ಅಥವಾ ಖಾಸಗಿ ಬ್ರೌಸಿಂಗ್ ಮೋಡ್ ಬಳಸುವಂತೆ ಐ4ಸಿ ಸಲಹೆ ನೀಡಿದೆ.
ಸರ್ಕಾರಿ, ಸಾಂಸ್ಥಿಕ, ಹಣಕಾಸು, ಗೌಪ್ಯ ಅಥವಾ ಇತರ ಸೂಕ್ಷ್ಮ ಮಾಹಿತಿಗಳನ್ನು ಕಂಪ್ಯೂಟರ್ನಲ್ಲಿನ ವಾಟ್ಸಾಪ್ ವೆಬ್ ಸೆಷನ್ ಮೂಲಕ ವಿನಿಮಯ ಮಾಡಿಕೊಳ್ಳದಿರುವುದು ಸೂಕ್ತ ಎಂದು ಸೂಚಿಸಲಾಗಿದೆ. ಅಗತ್ಯವಿಲ್ಲದಿದ್ದಾಗ ಕಚೇರಿ ಅಥವಾ ಹಂಚಿಕೆಯ ಕಂಪ್ಯೂಟರ್ಗಳಲ್ಲಿ ವಾಟ್ಸಾಪ್ ವೆಬ್ ಸೆಷನ್ ಸಕ್ರಿಯವಾಗಿ ಇರಬಾರದು ಎಂದು ಗೃಹ ಸಚಿವಾಲಯ ಎಚ್ಚರಿಸಿದೆ.
ಸೈಬರ್ ಕೆಫೆಗಳು, ಸಾರ್ವಜನಿಕ ಕಿಯೋಸ್ಕ್ಗಳು, ಹೋಟೆಲ್ಗಳ ಬ್ಯುಸಿನೆಸ್ ಸೆಂಟರ್ಗಳು, ಎರವಲು ಪಡೆದ ಕಂಪ್ಯೂಟರ್ಗಳು ಹಾಗೂ ಇತರ ಅಸುರಕ್ಷಿತ ವ್ಯವಸ್ಥೆಗಳಿಂದ ವಾಟ್ಸಾಪ್ ವೆಬ್ಗೆ ಲಾಗಿನ್ ಆಗಬಾರದು. ಖಾತೆಯಲ್ಲಿ ಕಂಡುಬರುವ ಅಸಾಮಾನ್ಯ ಚಟುವಟಿಕೆಗಳ ಬಗ್ಗೆಯೂ ಎಚ್ಚರಿಕೆಯಿಂದ ಗಮನಹರಿಸುವಂತೆ ಸರ್ಕಾರಿ ಸಿಬ್ಬಂದಿಗೆ ಸೂಚಿಸಲಾಗಿದೆ.




