*ಬೆಂಗಳೂರಿನಲ್ಲಿ ಅಕ್ರಮ ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್*: *ಒಂದೇ ದಿನ ಮೂರು ಕಡೆ ಪಾಲಿಕೆ ಕಾರ್ಯಾಚರಣೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳ ಒತ್ತುವರಿ ಹಾಗೂ ವಸತಿ ಪ್ರದೇಶಗಳಲ್ಲಿನ ಅಕ್ರಮ ವಾಣಿಜ್ಯ ಚಟುವಟಿಕೆಗಳ ವಿರುದ್ಧ ನಗರ ಪಾಲಿಕೆ ಸಮರ ಸಾರಿದೆ. ಒಂದೆಡೆ ವಸತಿ ಕಟ್ಟಡಗಳಲ್ಲಿ ಅನುಮತಿ ಇಲ್ಲದೆ ವ್ಯಾಪಾರ ನಡೆಸುತ್ತಿದ್ದ ಸಂಸ್ಥೆಗಳಿಗೆ ಬೀಗ ಹಾಕಲಾಗಿದೆ. ಮತ್ತೊಂದೆಡೆ ಶಾಪಿಂಗ್ ಕಾಂಪ್ಲೆಕ್ಸ್ಗಳಲ್ಲಿನ ಅನಧಿಕೃತ ವ್ಯಾಪಾರಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಫುಟ್ಪಾತ್ಗಳ ಮೇಲಿನ ಒತ್ತುವರಿಯನ್ನೂ ತೆರವುಗೊಳಿಸಲಾಗಿದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಚಟುವಟಿಕೆಗಳ ವಿರುದ್ಧ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಆರ್ಎಂವಿ 2ನೇ ಹಂತದಲ್ಲಿ ಅಗತ್ಯ ಅನುಮತಿ ಪಡೆಯದೆ ವಸತಿ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದ ಸಂಸ್ಥೆಗಳ ವಿರುದ್ಧ ಬೆಂಗಳೂರು ಉತ್ತರ ನಗರ ಪಾಲಿಕೆ ಜಂಟಿ ಕಾರ್ಯಾಚರಣೆ ನಡೆಸಿದೆ. ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರಿನ ಹಿನ್ನೆಲೆಯಲ್ಲಿ ಹಾಗೂ ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಒಟ್ಟು 21 ವಾಣಿಜ್ಯ ಸಂಸ್ಥೆಗಳನ್ನು ಗುರುತಿಸಲಾಗಿತ್ತು. ಈ ಪೈಕಿ 11 ಸಂಸ್ಥೆಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಉಳಿದ 10 ಸಂಸ್ಥೆಗಳ ವಿರುದ್ಧವೂ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚುತ್ತಿರುವುದು ಬಡಾವಣೆಗಳ ನಿವಾಸಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಮನೆಗಳಿರುವ ಪ್ರದೇಶಗಳಲ್ಲಿ ಅನುಮತಿಯಿಲ್ಲದೆ ಅಂಗಡಿ, ಕಚೇರಿ ಹಾಗೂ ಇತರ ವಾಣಿಜ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಹೀಗಾಗಿ ನಗರದ ಇತರ ವಸತಿ ಬಡಾವಣೆಗಳಲ್ಲೂ ಇದೇ ರೀತಿಯ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ.
ಇನ್ನು ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ನಲ್ಲೂ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳಿಸಿದೆ. ಹಳದಿ ಗೆರೆ ದಾಟಿ ವ್ಯಾಪಾರ ನಡೆಸುವ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಾಂಪ್ಲೆಕ್ಸ್ನ ಗೇಟ್ ಹಾಗೂ ಕಾರಿಡಾರ್ಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗುವ ವಸ್ತುಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ. ಕಳೆದ 10ರಿಂದ 15 ದಿನಗಳಿಂದ ನಿರಂತರವಾಗಿ ಜಾಗೃತಿ ಮೂಡಿಸಿದರೂ ವ್ಯಾಪಾರಿಗಳು ನಿಯಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇಂದಿನಿಂದ ಕಾಂಪ್ಲೆಕ್ಸ್ನಲ್ಲಿ ಮಾರ್ಷಲ್ಗಳನ್ನು ನಿಯೋಜಿಸಲು ಆದೇಶಿಸಲಾಗಿದೆ. ನಿಗದಿತ ಸ್ಥಳ ಮೀರಿ ವ್ಯಾಪಾರ ನಡೆಸುವವರಿಗೆ ದಂಡ ವಿಧಿಸಲಾಗುತ್ತದೆ. ಅನಧಿಕೃತ ಜಾಹೀರಾತು ಫಲಕಗಳು ಹಾಗೂ ಗೋದಾಮು ಮಳಿಗೆಗಳ ಪರಿಶೀಲನೆಯನ್ನೂ ನಡೆಸಲಾಗುತ್ತದೆ.
ಇನ್ನೊಂದೆಡೆ, ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಗೋವಿಂದಪುರದಲ್ಲೂ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಪಾದಚಾರಿಗಳು ಸುರಕ್ಷಿತವಾಗಿ ಹಾಗೂ ಯಾವುದೇ ಅಡೆತಡೆಯಿಲ್ಲದೆ ಸಂಚರಿಸಲು ಅನುಕೂಲ ಮಾಡಿಕೊಡುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ.
ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಸುಗಮ ವ್ಯವಸ್ಥೆ ಕಲ್ಪಿಸುವುದು ಹಾಗೂ ಫುಟ್ಪಾತ್ಗಳ ಬಳಕೆಯನ್ನು ಸಾರ್ವಜನಿಕರಿಗೆ ಮರಳಿ ಒದಗಿಸುವುದು ಪಾಲಿಕೆಯ ಪ್ರಮುಖ ಗುರಿಯಾಗಿದೆ. ಒಟ್ಟಿನಲ್ಲಿ ನಗರದ ವಸತಿ ಪ್ರದೇಶಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಪಾಲಿಕೆ ಕ್ರಮ ಕೈಗೊಂಡಿದೆ.




