*ಪಂಜಾಬಿ ಗಾಯಕ ದಿಲ್ಜಿತ್ ದೋಸಂಜ್ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ*: *ಇಮೇಲ್ನಲ್ಲಿ ಏನಿದೆ?*

ಪ್ರಗತಿವಾಹಿನಿ ಸುದ್ದಿ: ಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಂಜ್ ಅವರ ಸಂಗೀತ ಕಾರ್ಯಕ್ರಮದ ಸುತ್ತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ಅಭಿಮಾನಿಗಳು ಸೇರಲಿರುವ ಕಾರ್ಯಕ್ರಮಕ್ಕೆ ಬಾಂಬ್ ಸ್ಫೋಟದ ಬೆದರಿಕೆ ಬಂದಿದೆ. ಇಮೇಲ್ ಮೂಲಕ ಬಂದಿರುವ ಸಂದೇಶದಲ್ಲಿ ಸ್ಫೋಟದ ಎಚ್ಚರಿಕೆಯ ಜೊತೆಗೆ ಖಲಿಸ್ತಾನ್ ಪರ ಘೋಷಣೆಯನ್ನೂ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಕಾರ್ಯಕ್ರಮಕ್ಕೆ ಬರುವವರಿಗೆ ಕೆಲವು ನಿರ್ಬಂಧಗಳನ್ನೂ ವಿಧಿಸುವ ರೀತಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ನವೆಂಬರ್ 29ರಂದು ಮಾದನಾಯಕನಹಳ್ಳಿ ಬಳಿಯ ಬಿಇಐಸಿಯಲ್ಲಿ ದಿಲ್ಜಿತ್ ದೋಸಂಜ್ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸುಮಾರು 20ರಿಂದ 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದೇ ಕಾರ್ಯಕ್ರಮದಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಕಚೇರಿಗೆ ಇಮೇಲ್ ಮೂಲಕ ಈ ಬೆದರಿಕೆ ಸಂದೇಶ ರವಾನೆಯಾಗಿದೆ. ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಬರಬೇಡಿ, ಮಕ್ಕಳನ್ನು ಕರೆದುಕೊಂಡು ಬರಬೇಡಿ. ಸ್ಫೋಟ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ಇಮೇಲ್ನಲ್ಲಿ ನೀಡಲಾಗಿದೆ. ಇದರ ಜೊತೆಗೆ ‘ಖಲಿಸ್ತಾನ್ ಜಿಂದಾಬಾದ್’ ಎಂಬ ಸಂದೇಶವನ್ನೂ ಕಳುಹಿಸಲಾಗಿದೆ.
ಈ ಬೆದರಿಕೆ ಇಮೇಲ್ ಗಮನಕ್ಕೆ ಬಂದ ತಕ್ಷಣ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಕಚೇರಿಯಿಂದಲೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಿದೆ.
ಈ ಸಂಬಂಧ ಉತ್ತರ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೆದರಿಕೆ ಸಂದೇಶದ ಮೂಲ, ಇಮೇಲ್ ಕಳುಹಿಸಿದವರ ಗುರುತು ಹಾಗೂ ಅದರ ಹಿಂದಿರುವ ಉದ್ದೇಶದ ಬಗ್ಗೆ ತನಿಖೆ ಆರಂಭಿಸಿದ್ದಾರೆ.




