Kannada NewsKarnataka NewsLatestPolitics

*‘ಕಳ್ಳರು ಬಂದಿದ್ದಾರೆ’ ಎಂದು ಭಾವಿಸಿ ಮಧ್ಯರಾತ್ರಿ ಸಿಎಂ ಡಿಕೆಶಿಯನ್ನೇ ಓಡಿಸಿದರಂತೆ ಗ್ರಾಮಸ್ಥರು*: *ಎಚ್‌ಡಿಕೆ ವ್ಯಂಗ್ಯ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಮುಕ್ತ ಸರ್ಕಾರ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಮಧ್ಯರಾತ್ರಿ ಜಮೀನು ನೋಡಲು ಹೋದಾಗ ಗ್ರಾಮಸ್ಥರು ಕಳ್ಳರೆಂದು ಭಾವಿಸಿ ಮುಖ್ಯಮಂತ್ರಿಯನ್ನೇ ಓಡಿಸಿದ ಘಟನೆಯನ್ನು ಪ್ರಸ್ತಾಪಿಸಿದ್ದಾರೆ. 15 ಎಕರೆ ಜಮೀನು ನೋಡಲು ಹೋಗಿದ್ದ ಸಿಎಂಗೆ ಗ್ರಾಮಸ್ಥರಿಂದ ಇಂತಹ ಪರಿಸ್ಥಿತಿ ಎದುರಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಸುಮಾರು 15 ದಿನಗಳ ಹಿಂದೆ ನೆಲಮಂಗಲದ ಸೋಂಪುರದ ಸಮೀಪದ ಹಳ್ಳಿಯೊಂದಕ್ಕೆ ಮುಖ್ಯಮಂತ್ರಿ ಮಧ್ಯರಾತ್ರಿ ಜಮೀನು ನೋಡಲು ಹೋಗಿದ್ದರು. ಈ ವೇಳೆ ಕಳ್ಳರು ಬಂದಿದ್ದಾರೆಂದು ಭಾವಿಸಿದ ಗ್ರಾಮಸ್ಥರು ಅವರನ್ನು ಓಡಿಸಿದ್ದಾರೆ. ಎದ್ನೋ ಬಿದ್ನೋ ಎಂದು ಸಿಎಂ ಅಲ್ಲಿಂದ ಓಡಿ ಬಂದಿದ್ದಾರೆ. ಇದೇನಾ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಪ್ರಶ್ನಿಸಿ ಲೇವಡಿ ಮಾಡಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳ ಅರಿವಿಲ್ಲವೇ ಎಂದು ಪ್ರಶ್ನಿಸಿದ ಅವರು, ಇತ್ತೀಚೆಗೆ 20 ಗುಂಟೆ ಜಮೀನಿನ ಕೆಲಸಕ್ಕಾಗಿ ರೆವಿನ್ಯೂ ಇನ್ಸ್‌ಪೆಕ್ಟರ್ 50 ಸಾವಿರ ರೂಪಾಯಿ ಲಂಚ ಪಡೆದು ಅಮಾನತುಗೊಂಡಿದ್ದಾನೆ. ಇದು ಭ್ರಷ್ಟಾಚಾರವಲ್ಲವೇ ಎಂದು ಪ್ರಶ್ನಿಸಿದರು.

ಅಧಿಕಾರಿಗಳು ಹಣ ಪಡೆದ ಪ್ರಕರಣಗಳನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ಕೆಲವರು ಕೆಲಸ ಮಾಡಿಕೊಡಲು ಹಣ ಪಡೆದು ಸಿಕ್ಕಿಬೀಳುತ್ತಿದ್ದಾರೆ. ಇಂತಹ ಪ್ರಕರಣಗಳ ದಾಖಲೆಗಳು ಸಾಕಷ್ಟು ಇವೆ ಎಂದು ಆರೋಪಿಸಿದರು. ಗೌರವಧನದ ಹೆಸರಿನಲ್ಲಿ ಹಣ ನೀಡಬೇಕೆಂದು ಹೇಳುತ್ತಿರುವುದು ಕೂಡ ಸರಿಯಲ್ಲ ಎಂದು ಟೀಕಿಸಿದರು.

ಇದೇ ವೇಳೆ ಸಿಎಂ ಅವರ ಜಪಾನ್ ಭೇಟಿಯ ವಿಚಾರವನ್ನೂ ಪ್ರಸ್ತಾಪಿಸಿದರು. ಟೊಯೊಟಾ ಕಂಪನಿಯನ್ನು ಕರ್ನಾಟಕಕ್ಕೆ ತರುವಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪಾತ್ರ ಮಹತ್ವದ್ದಾಗಿತ್ತು. ಕಂಪನಿ ಬೇರೆ ರಾಜ್ಯಗಳಿಗೆ ಹೋಗುವ ಸಾಧ್ಯತೆ ಇದ್ದಾಗ ದೇವೇಗೌಡರು ಮನವಿ ಮಾಡಿ ಕರ್ನಾಟಕಕ್ಕೆ ತಂದಿದ್ದರು ಎಂದು ಹೇಳಿದರು.

ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆ ಯೋಜನೆಯಿಂದ ಮರಳು, ಇಟ್ಟಿಗೆ ಸೇರಿದಂತೆ ವಿವಿಧ ಹೆಸರಿನಲ್ಲಿ ಹಣ ಮಾಡಿದ ಆರೋಪವನ್ನೂ ಅವರು ಮಾಡಿದರು. ಪ್ರಾಜೆಕ್ಟ್ 4 ಅನ್ನು ಮಹಾರಾಷ್ಟ್ರದಲ್ಲಿ ಹೂಡಿಕೆ ಮಾಡಲು ಯಾಕೆ ಮುಂದಾದರು? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೊದಲು ತಮ್ಮ ಆಡಳಿತವನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಆಶಾ ಕಾರ್ಯಕರ್ತೆಯರ ವಿಚಾರದಲ್ಲೂ ಸಿಎಂಗೆ ತಿರುಗೇಟು

ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸಲಿ ಎಂಬ ಮುಖ್ಯಮಂತ್ರಿ ಹೇಳಿಕೆಗೂ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ಕೇಂದ್ರ ಸರ್ಕಾರದ ಪಾಲಿನ ಹಣ ಬೇರೆ, ರಾಜ್ಯ ಸರ್ಕಾರ ನೀಡಬೇಕಾದ ಹಣ ಬೇರೆ. ಮೊದಲು ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಏನು ನೀಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು.

ಈ ಹಿಂದೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ದೆಹಲಿಗೆ ಕರೆದುಕೊಂಡು ಹೋಗಿ ಸಂಬಂಧಪಟ್ಟ ಎರಡು ಇಲಾಖೆಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಆ ಪ್ರಯತ್ನದ ಫಲಿತಾಂಶ ಏನಾಗುತ್ತದೆ ಎಂಬುದನ್ನು ನೋಡೋಣ ಎಂದರು.

ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 15 ಸಾವಿರ ರೂಪಾಯಿ ಗೌರವಧನ ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಈಗ ಹನ್ನೆರಡು ದಿನಗಳಿಂದ ಮಹಿಳೆಯರು ಚಳಿ, ಮಳೆಯ ನಡುವೆಯೇ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವೇ ನೇಮಕ ಮಾಡಿದೆ ಎಂದು ಹೇಳುವವರು, ನೇಮಕದ ಸಮಯದಲ್ಲಿ ಯಾಕೆ ವಿರೋಧಿಸಲಿಲ್ಲ ಎಂದು ಪ್ರಶ್ನಿಸಿದರು.

ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಲಿ. ನಂತರ ಕೇಂದ್ರ ಸರ್ಕಾರದ ಪಾಲಿನ ಬಗ್ಗೆ ಮಾತನಾಡೋಣ ಎಂದು ಕುಮಾರಸ್ವಾಮಿ ಸಿಎಂಗೆ ತಿರುಗೇಟು ನೀಡಿದರು.

ಹೀಗೆ ಜಮೀನು ವಿವಾದ, ಭ್ರಷ್ಟಾಚಾರದ ಆರೋಪಗಳಿಂದ ಹಿಡಿದು ಆಶಾ ಕಾರ್ಯಕರ್ತೆಯರ ಗೌರವಧನದವರೆಗೂ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Related Articles

Back to top button