
ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕರ ಬಳಕೆಗಾಗಿ ಮೀಸಲಿಟ್ಟಿದ್ದ ಜಾಗದಲ್ಲೇ ನಿವೇಶನಗಳು ಸೃಷ್ಟಿಯಾಗಿರುವ ಆರೋಪ ಕೇಳಿಬಂದಿದೆ. ಅನುಮೋದಿತ ನಕ್ಷೆಯಲ್ಲಿ 17 ನಿವೇಶನಗಳಿಗೆ ಮಾತ್ರ ಅವಕಾಶವಿದ್ದರೂ, ಹೆಚ್ಚುವರಿಯಾಗಿ ಆರು ನಿವೇಶನಗಳನ್ನು ರಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಷ್ಟೇ ಅಲ್ಲ, ಅಗತ್ಯ ದಾಖಲೆಗಳಿಲ್ಲದಿದ್ದರೂ ಇ-ಸ್ವತ್ತು ಖಾತೆಗಳನ್ನೂ ವಿತರಿಸಲಾಗಿದ್ದು, ಪ್ರಕರಣದ ಬೆನ್ನಲ್ಲೇ ಗ್ರಾಮ ಪಂಚಾಯಿತಿ ಪಿಡಿಒರನ್ನು ಅಮಾನತುಗೊಳಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ನಡೆದಿದೆ. ಪಾರ್ಕ್ ಹಾಗೂ ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ನಿವೇಶನಗಳನ್ನು ಸೃಷ್ಟಿಸಿ, ಖಾಸಗಿ ವ್ಯಕ್ತಿಗಳ ಹೆಸರಿಗೆ ಇ-ಸ್ವತ್ತು ಖಾತೆಗಳನ್ನು ವಿತರಿಸಲಾಗಿದೆ ಎಂಬ ದೂರಿನ ಆಧಾರದ ಮೇಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎ. ಭಾಗ್ಯಲಕ್ಷ್ಮಿ ಅವರನ್ನು ಅಮಾನತುಗೊಳಿಸಲಾಗಿದೆ.
ಬಾಗೇಪಲ್ಲಿಯ ವಕೀಲ ಎನ್. ನಾಗಭೂಷಣ್ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ತನಿಖೆ ನಡೆಸಿತ್ತು. ಈ ವೇಳೆ ಅನುಮೋದಿತ ಲೇಔಟ್ ನಕ್ಷೆಯಲ್ಲಿ ಕೇವಲ 17 ನಿವೇಶನಗಳಿಗೆ ಅವಕಾಶವಿದ್ದರೂ, ಪಾರ್ಕ್ಗೆ ಮೀಸಲಿಟ್ಟ ಜಾಗದಲ್ಲಿ ಹೆಚ್ಚುವರಿಯಾಗಿ ಆರು ನಿವೇಶನಗಳನ್ನು ಸೃಷ್ಟಿಸಿ ಇ-ಸ್ವತ್ತು ವಿತರಿಸಿರುವುದು ಬೆಳಕಿಗೆ ಬಂದಿದೆ.
ಇಷ್ಟೇ ಅಲ್ಲದೆ, ಅಗತ್ಯ ದಾಖಲೆಗಳನ್ನು ಪರಿಶೀಲಿಸದೆ ಸುಮಾರು 14 ಇ-ಸ್ವತ್ತುಗಳಿಗೆ ಮ್ಯುಟೇಷನ್ ಮಾಡಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ. ಭೂ ಪರಿವರ್ತನೆ ಆದೇಶ ಮತ್ತು ಅನುಮೋದಿತ ಲೇಔಟ್ ನಕ್ಷೆ ಇಲ್ಲದಿದ್ದರೂ ಇ-ಸ್ವತ್ತು ವಿತರಿಸಿರುವ ಲೋಪಗಳೂ ಕಂಡುಬಂದಿವೆ.
ಈ ಸಂಬಂಧ ಪಿಡಿಒ ಭಾಗ್ಯಲಕ್ಷ್ಮಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದರೆ ಅವರು ಸಲ್ಲಿಸಿದ ಸಮಜಾಯಿಷಿ ಸಮಂಜಸವಾಗಿಲ್ಲ ಎಂದು ಅಧಿಕಾರಿಗಳು ಪರಿಗಣಿಸಿದ್ದಾರೆ. ಹೀಗಾಗಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಿಇಒ ಡಾ. ವೈ. ನವೀನ್ ಭಟ್ ಅಮಾನತು ಆದೇಶ ಹೊರಡಿಸಿದ್ದಾರೆ.
ಅಮಾನತು ಅವಧಿಯಲ್ಲಿ ಭಾಗ್ಯಲಕ್ಷ್ಮಿ ಅವರ ಲೀನ್ ಅನ್ನು ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಗ್ರಾಮ ಪಂಚಾಯಿತಿಗೆ ವರ್ಗಾಯಿಸಲಾಗಿದೆ. ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಿಟ್ಟ ಜಾಗದ ಇ-ಸ್ವತ್ತು ವಿತರಣೆಯಲ್ಲಿನ ಅಕ್ರಮದ ಆರೋಪ ಇದೀಗ ಪಂಚಾಯಿತಿ ಆಡಳಿತದಲ್ಲಿ ಚರ್ಚೆಗೆ ಕಾರಣವಾಗಿದೆ.




