CrimeKannada NewsKarnataka News

*ರಸ್ತೆ ಮಧ್ಯೆ ತಪಾಸಣೆ*: *RTO ಅಧಿಕಾರಿಗಳ ಎಡವಟ್ಟಿಗೆ ಮೂವರು ಸಾವು*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿಗೆ ವೇಗವಾಗಿ ಬಂದ ಥಾರ್ ಜೀಪ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಮೂವರು ಯುವಕರು ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ತಾಲೂಕಿನ ಇಂದುಳುವಿನ ಸಮೀಪ ಸಂಭವಿಸಿದೆ.

ಮೃತರನ್ನು ಕೇರಳದ ಕಲ್ಲಿಕೋಟೆ ಮೂಲದ ಫಾಸಿಲ್ ಮೊಹಮ್ಮದ್ ಅಲಿ (21), ಸ್ವಪ್ನಾ (22) ಹಾಗೂ ನಿಫೈನ್ (22) ಎಂದು ಗುರುತಿಸಲಾಗಿದೆ. ಬಸಿಲ್ ಮತ್ತು ಸ್ವಪ್ನಾ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ನಿಫೈಲ್ ಅವರನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಆರ್‌ಟಿಒ ಅಧಿಕಾರಿಗಳ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ?

 ಮೂವರು ಕಲ್ಲಿಕೊಟೆಯಿಂದ ಬೆಂಗಳೂರಿಗೆ ಥಾರ್ ಜೀಪಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬೆಳಗ್ಗೆ ಸುಮಾರು 9 ಗಂಟೆಗೆ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಆರ್‌ಟಿಒ ಅಧಿಕಾರಿಗಳಾದ ಸಿಎಂ ಗೌಡ ಹಾಗೂ ಜೀಪ್ ಚಾಲಕ ಪಾಣಿ ಅವರು ಜಲ್ಲಿ ತುಂಬಿಕೊಂಡು ಬರುತ್ತಿದ್ದ ಟಿಪ್ಪರ್‌ಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಇಂದುಳುವಿನ ಸಮೀಪದ ನಿರ್ಗಮನ ರಸ್ತೆಯ ಬಳಿ ಮೂರು ಟಿಪ್ಪರ್‌ಗಳು ಬರುತ್ತಿದ್ದಾಗ ಅಧಿಕಾರಿಗಳು ಅವುಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಎರಡು ಟಿಪ್ಪರ್‌ಗಳು ರಸ್ತೆ ಬದಿ ನಿಂತಿದ್ದರೆ, ಮತ್ತೊಂದು ಟಿಪ್ಪರ್ ನಿಲ್ಲಿಸದೆ ಮುಂದೆ ಸಾಗಿತ್ತು ಎನ್ನಲಾಗಿದೆ.

ಇದರಿಂದ ಆ ಟಿಪ್ಪರ್ ಅನ್ನು ಇಲಾಖೆಯ ಜೀಪಿನಲ್ಲಿ ಬೆನ್ನಟ್ಟಿದ ಅಧಿಕಾರಿಗಳು, ವಾಹನವನ್ನು ಹಿಂದಿಕ್ಕಿ ಅದರ ಮುಂದೆ ಅಡ್ಡಲಾಗಿ ಜೀಪ್ ನಿಲ್ಲಿಸಿ ತಡೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದರಿಂದ ಗಾಬರಿಗೊಂಡ ಟಿಪ್ಪರ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದು, ಎಕ್ಸ್‌ಪ್ರೆಸ್‌ವೇ ಮಧ್ಯೆಯೇ ಟಿಪ್ಪರ್ ನಿಂತಿದೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಥಾರ್ ಜೀಪ್ ಚಾಲಕನಿಗೆ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೆ ಟಿಪ್ಪರ್ ಹಿಂಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಥಾರ್ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಆರ್‌ಟಿಒ ಅಧಿಕಾರಿಗಳ ವಿರುದ್ಧ ಆಕ್ರೋಶ

ಅಪಘಾತದ ಬಳಿಕ ಸ್ಥಳೀಯರು ಹಾಗೂ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದು, ವಾಹನಗಳ ತಪಾಸಣೆ ಹೆಸರಿನಲ್ಲಿ ಆರ್‌ಟಿಒ ಅಧಿಕಾರಿಗಳು ಅನುಸರಿಸಿದ ಕ್ರಮವೇ ಈ ದುರಂತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ಜನದಟ್ಟಣೆಯ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿದೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ ವಿ.ಜೆ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Back to top button