ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಬಾಲಕಿಯೊಬ್ಬಳು ಮಾಡಿ ಕಳುಹಿಸಿದ್ದ ಟಿಕ್ ಟಾಕ್ ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿಢೀರ್ ಸ್ಪಂದಿಸಿದ ಅಪರೂಪದ ಘಟನೆ ಇಂದು ನಡೆದಿದೆ.
ಪವಿತ್ರಾ ಅರಬಾವಿ ಎನ್ನುವ ಯುವತಿ ಟಿಕ್ ಟಾಕ್ ಮಾಡಿ ತಾನು ಮತ್ತು ತಂದೆಯಿಂದ ತಮ್ಮ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಳು.
ನಮ್ಮ ತಾಯಿಗೆ ಮೂತ್ರಕೋಶದ (ಕಸಿ)ಮರುಜೋಡಣೆ ಶಸ್ತ್ರಚಿಕಿತ್ಸೆಯಾಗಿದೆ. ನಮ್ಮ ತಂದೆಯೇ ತಾಯಿಗೆ ಕಿಡ್ನಿ ಕೊಟ್ಟಿದ್ದಾರೆ. ಆದರೆ ಈಗ ಅವಳಿಗೆ ಲಾಕ್ ಡೌನ್ ಸಮಸ್ಯೆಯಿಂದಾಗಿ ಮಾತ್ರೆಗಳು ಸಿಗುತ್ತಿಲ್ಲ. ಬೆಂಗಳೂರಿನಿಂದ ಬರಬೇಕಾದ ಗುಳಿಗೆಗಳು ಬರುತ್ತಿಲ್ಲ. ನೀವು ನಮ್ಮ ಸಮಸ್ಯೆಗೆ ಹೇಗೆ ಸ್ಪಂದಿಸುತ್ತೀರಿ ಎಂದು ಪ್ರಶ್ನಿಸಿದ್ದಳು.
ಈ ಟಿಕ್ ಟಾಕ್ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್ ಅವರಿಗೆ ಶುಕ್ರವಾರ ಸಂಜೆ ಸಿಕ್ಕಿತು. ಅವರು ತಕ್ಷಣ ಸಿಎಂ ಬಳಿ ತೆರಳಿ ಟಿಕ್ ಟಾಕ್ ತೋರಿಸಿದರು. ಟಿಕ್ ಟಾಕ್ ನೋಡಿದ ಸಿಎಂ ತಕ್ಷಣ ತಮ್ಮ ವಿಶೇಷಾಧಿಕಾರಿ ಮೂಲಕ ಬೆಳಗಾವಿ ಜಿಲ್ಲಾಧಿಕಾರಿಗೆ ಕರೆ ಮಾಡಿದರು. ಯುವತಿಯ ಸಮಸ್ಯೆಗೆ ಸ್ಪಂದಿಸಬೇಕು. ಕೂಡಲೆ ಅವರಿಗೆ ಅಗತ್ಯ ಔಷಧಗಳನ್ನು ಪೂರೈಸಬೇಕು ಎಂದು ಸೂಚಿಸಿದರು.
ಕೂಡಲೇ ಸಿಎಂ ಕರೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಬೆಳಗಾವಿಯ ತಹಶೀಲ್ದಾರರ ಮೂಲಕ ಅವರಿಗೆ ಒಂದು ತಿಂಗಳಿಗೆ ಅಗತ್ಯವಿರುವ ಮಾತ್ರೆಗಳನ್ನು ಅವರ ಮನೆ ಬಾಗಿಲಿಗೆ ಕಳುಹಿಸಿಕೊಡುವ ಮೂಲಕ ತಕ್ಷಣ ಸ್ಪಂದಿಸಿದ್ದಾರೆ.
ಸಿಎಂ ಅವರ ಈ ಅಪರೂಪದ ಮಾನವೀಯ ಸ್ಪಂದನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಯುವತಿಯ ಟಿಕ್ ಟಾಕ್ ನೋಡಲು ಇಲ್ಲಿ ಕ್ಲಿಕ್ ಮಾಡಿ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ