ಪ್ರಗತಿವಾಹಿನಿ ಸುದ್ದಿ, ತಾಳಿಕೋಟೆ – ಹಾವು ಕಚ್ಚಿ ತಂದೆ ಸಾವಿಗೀಡಾದ ದುಃಖದ ನಡುವೆಯೂ ಬಾಲಕನೋರ್ವ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದಾನೆ.
ಕೊರೊನಾ ವೈರಸ್ ಭೀತಿಯ ನಡುವೆಯೂ ನಡೆದ ಎಸ್.ಎಸ್.ಎಲ್.ಸಿ ಪರಿಕ್ಷೆಯ ಸಂದರ್ಭದಲ್ಲಿ ತಂದೆಗೆ ಹಾವು ಕಚ್ಚಿ ಸಾವನಪ್ಪಿದ್ದ. ಈ ಸಂದರ್ಭದಲ್ಲಿ ಮನೆಯಲ್ಲಿ ಪಾರ್ಥಿವ ಶರೀರದ ಮುಂದೆ ದುಃಖದ ಮಡುವಿನಲ್ಲಿದ್ದ ಕುಟುಂಬಸ್ಥರ, ಸಂಬಂಧಿಗಳ ರೋಧನದ ನಡುವೆಯೂ ಬಾಲಕನಿಗೆ ಧೈರ್ಯ ತುಂಬಿದ್ದು ಗ್ರಾಮಸ್ಥರು.
ತಾಳಿಕೋಟೆ ತಾಲೂಕಿನ ಫೀರಾಪೂರ ಗ್ರಾಮದ ರೈತ ಸಿದ್ದಪ್ಪ ಬಸ್ಸಪ್ಪ ಸಾಗರ (೪೫) ತನ್ನ ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ. ಇದನ್ನು ಅರಿಯದ ಸಿದ್ದಪ್ಪ ಸಾಗರ ಏನೋ ತರಚಿರಬಹುದು ಎಂದು ತಿಳಿದು ಮನೆಗೆ ಬಂದಾಗ ಸುಸ್ತಾಗುತ್ತಾ ಮಲಗಿಕೊಂಡಿದ್ದಾನೆ. ಹಾವಿನ ವಿಷ ಮೈಯಲ್ಲಾ ಏರಿ ಕೊನೆಗೆ ಯಾವುದೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ತನ್ನ ತಂದೆಯ ಸಾವಿನ ನೋವಿನಲ್ಲಿದ್ದ ಬಾಲಕ ಪರಶುರಾಮ ಗುರುವಾರದ ಕನ್ನಡ ಪರಿಕ್ಷೆ ಬರೆಯಲು ಹಿಂದೇಟು ಹಾಕಿದಾಗ ಆತನ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗೆ ಧೈರ್ಯ ತುಂಬಿದ ಕುಟುಂಬಸ್ಥರು ಮತ್ತು ಗ್ರಾಮದ ಮುಖಂಡರಾದ ಸುರೇಶಬಾಬುಗೌಡ ಬಿರಾದಾರ(ಫೀರಾಪೂರ) ಅವರು ಬಾಲಕನಿಗೆ ಮಾನಸಿಕ ಸ್ಥೈರ್ಯ ತುಂಬಿ ತಾಳಿಕೋಟೆ ಪಟ್ಟಣದಲ್ಲಿರುವ ಶ್ರೀಸಂಗಮೇಶ್ವರ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಬೈಕ್ ಮೂಲಕ ಕಳುಹಿಸಿಕೊಡುವಂತ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪರೀಕ್ಷೆ ಬರೆದ ಬಳಿಕ ಬಾಲಕ ಪರಶುರಾಮ ಬೈಕ್ ಮೂಲಕ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ವಿಧಿವಿಧಾನಗಳನ್ನು ನಡೆಸಿಕೊಟ್ಟಿದ್ದಾನೆ.
ರಾಜ್ಯದೆಲ್ಲಡೆ ತನ್ನ ಬಾವುವನ್ನು ಚಾಚುತ್ತಾ ಅಟ್ಟಹಾಸವನ್ನು ಮೇರೆಯುತ್ತಿರುವ ಕೊರೊನಾ ವೈರಸ್ ಭೀತಿ ನಡುವೆ, ಪರೀಕ್ಷೆ ಮಾಡಬೇಕೋ ಅಥವಾ ಬೇಡವೋ ಎಂಬ ಗೊಂದಲದ ನಡುವೆ ನಡೆದ ಪರಿಕ್ಷೆಯಲ್ಲಿ ತನ್ನ ತಂದೆ ಸಾವಿನ ನೋವಿನಲ್ಲಿಯೂ ವಿದ್ಯಾರ್ಥಿಯೊಬ್ಬ ಎಸ್‌ಎಸ್‌ಎಎಲ್‌ಸಿ ಪರೀಕ್ಷೆಗೆ ಹಾಜರಾಗುವ ಮೂಲಕ, ಕೊರೊನಾ ವೈರಸ್ ನೆಪದ ಮೇಲೆ ಪರೀಕ್ಷೆಯಿಂದ ತಪ್ಪಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ. ಶುಕ್ರವಾರವೂ ನಡೆದ ಕೊನೆಯ ಹಿಂದಿ ಭಾಷಾ ಪರಿಕ್ಷೆಗೂ ಹಾಜರಾಗಿ ಪರಿಕ್ಷೆಯನ್ನು ಬರೆದಿದ್ದಾನೆ.
ಮನೆಗೆ ಆಧಾರ ಸ್ಥಂಭವಾಗಿದ್ದ ಸಿದ್ದಪ್ಪ ಸಾಗರ ಹಾವು ಕಚ್ಚಿ ಮೃತಪಟ್ಟಿದ್ದರಿಂದ ಕುಟುಂಬವು ಚಿಂತಾಕ್ರಾಂತವಾಗಿದೆ ಸಿದ್ದಪ್ಪ ಸಾಗರಗೆ ಪತ್ನಿ ಓರ್ವ ಪುತ್ರಿ, ಪುತ್ರನಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ