ದುರಂತಕ್ಕೂ ಮುನ್ನ ಎಚ್ಚೆತ್ತುಕೊಳ್ಳುವುದೇ ಇಲಾಖೆ ?
ಇದು ಯಾವುದೋ ಅಲೆಮಾರಿಗಳು ತಂಗಲು ಹಾಕಿಕೊಂಡ ಬಿಡಾರವೆಂದುಕೊಂಡಿರೋ? ಅಥವಾ ಜಾತ್ರೆಯಲ್ಲಿ ಜೋಕಾಲಿಗೆ ಹಾಕಲಾದ ಕಬ್ಬಿಣದ ಸರಕುಗಳೆಂದುಕೊಂಡಿದ್ದಿರೋ?
ಊಹೂಂ ನಿಮ್ಮ ಊಹೆ ತಪ್ಪು. ಇದು ರಾಜ್ಯದ ಎರಡನೇ ರಾಜಧಾನಿ ಎನಿಸಿರುವ, ಸ್ವತಃ ಸಾರಿಗೆ ಮಂತ್ರಿಗಳ ತವರೂರು ಬೆಳಗಾವಿ ನಗರ ಬಸ್ ನಿಲ್ದಾಣ.
ಹೌದು ನೀವು ಇದನ್ನೊಮ್ಮೆ ಗಮನಿಸಿ ನೋಡಿ ಬೆಳಗಾವಿ ನಗರ ಬಸ್ ನಿಲ್ದಾಣದ ಈ ಅವಸ್ಥೆಯನ್ನು. ಮಳೆಗಾಲ ಆರಂಭಗೊಂಡು ತಿಂಗಳು ಕಳೆದಿದೆ. ಬಸ್ ಗಳನ್ನೇ ನಂಬಿಕೊಂಡು ನಿತ್ಯ ಪ್ರಯಾಣಿಸುವ ಜನರಿಗೆ ಬಿಸಿಲು, ಮಳೆಯ ಆಶ್ರಯಕ್ಕಾಗಿ ನಿರ್ಮಾಣ ಮಾಡಿರುವ ಈ ನಿಲ್ದಾಣ, ಈಗ ಬೀಳುತ್ತೋ ಇನ್ನಷ್ಟು ಹೊತ್ತಿನ ನಂತರ ಬೀಳುತ್ತೋ ಅಂತ ಜೀವ ಕೈಯಲ್ಲೆ ಹಿಡಿದುಕೊಂಡು ಮಳೆಯಲ್ಲಿ ತೋಯಿಸಿಕೊಳ್ಳುತ್ತ ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ಬೆಚ್ಚಗೆ ನಿಲ್ಲಲು ಮೇಲೊಂದು ಅಚ್ಚುಕಟ್ಟಾದ ಸೂರಿಲ್ಲ, ವಯಸ್ಸಾದವರು ಗರ್ಭಿಣಿಯರು ಮಕ್ಕಳು ಹಾಗೂ ರೋಗಿಗಳಿಗೆ ಕೂರುವ ಸೌಲಭ್ಯವಿಲ್ಲ, ನಿಲ್ದಾಣಕ್ಕೆ ಅಳವಡಿಸಲಾದ ಕಬ್ಬಿಣದ ಆ್ಯಂಗಲ್ ಪಟ್ಟಿ ಸ್ಥಿಮಿತ ಕಳೆದುಕೊಂಡಿದ್ದು ಈಗಲೋ ಆಗಲೋ ಬೀಳುವಂತಾಗಿದೆ. ಇದನ್ನೆಲ್ಲ ಕಂಡೂ ಕಾಣದಂತೆ ವರ್ತಿಸುವ ಬೇಜವಾಬ್ದಾರಿ ತೋರುವ ಅಧಿಕಾರಿಗಳು ಇಲ್ಲಿಯವರೆಗೂ ಸರಿಪಡಿಸುವ ಗೋಜಿಗೆ ಮುಂದಾಗಿಲ್ಲದಿರುವುದು ದುರಂತವೇ ಸರಿ.
ಸುಳೇಭಾಂವಿ, ಬಸರೀಕಟ್ಟಿ, ಮಾವಿನಕಟ್ಟಿ ಮತ್ತು ಪಂತಬಾಳೇಕುಂದ್ರಿಗೆ ಹೋಗುವ ಪ್ರಯಾಣಿಕರು ಬಸ್ ಹತ್ತಲು ಇಲ್ಲಿಯೇ ಕಾಯಬೇಕಿದ್ದು ಭಯದಿಂದಲೇ ಇಲ್ಲಿನ ಅವಸ್ಥೆ ಕಂಡು ದಂಗಾಗಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಇದನ್ನು ಸರಿಪಡಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸಿ ಕಾರುಗಳಲ್ಲಿ ಓಡಾಡೋ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಬಸ್ ನಲ್ಲಿ ಓಡಾಡುವ ಜನರ ಕಷ್ಟ ಹೇಗೆ ತಿಳಿಯಬೇಕು?
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಅಸ್ತವ್ಯಸ್ತವಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಈ ಬಸ್ ನಿಲ್ದಾಣವನ್ನು ಸರಿಪಡಿಸಿದರೆ ಒಳ್ಳೆಯದು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
✍ ಸಿದ್ದರಾಮ ತಳವಾರ, ದಾಸ್ತಿಕೊಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ