Kannada NewsKarnataka NewsLatest

ನಾನು ಅನುದಾನ ಕೊಟ್ಟಿದ್ದೇನೆ, ನೀವೂ ಕೊಡಿ: ಶಾಸಕ, ಸಂಸದರಿಗೆ ಅಭಯ ಪಾಟೀಲ ಮನವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಂದಿನ ಸಂಕಷ್ಟದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ 4 ಆಕ್ಸಿಜನ್ ಯಂತ್ರ ಖರೀದಿಸಲು ನಾನು ಅನುದಾನ ನೀಡುತ್ತಿದ್ದೇನೆ. ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸಹ ತಲಾ 4 ಯಂತ್ರ ಖರೀದಿಗೆ ಅನುದಾನ ನೀಡಬೇಕು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮನವಿ ಮಾಡಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಯಂತ್ರದ ತೀವ್ರ ಕೊರತೆ ಇದೆ. ಅಲ್ಲಿರುವ ಯಂತ್ರಗಳ ಸಾಮರ್ಥ್ಯವೂ ತೀರ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಶಾಸಕರ ನಿಧಿಯಿಂದ ನಿಮಿಷಕ್ಕೆ 80 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಯಂತ್ರಕ್ಕೆ ಅಗತ್ಯ ಅನುದಾನ ನೀಡುವಂತೆ ಶಾಸಕ ಅಭಯ ಪಾಟೀಲ ಬಳಿ ಆಸ್ಪತ್ರೆಯ ಅಧಿಕಾರಿಗಳು ಮನವಿ ಮಾಡಿದ್ದರು.

ಅದಕ್ಕೆ ಸ್ಪಂದಿಸಿದ ಅಭಯ ಪಾಟೀಲ 4 ಯಂತ್ರ ಖರೀದಿಗೆ ಅನುದಾನ ಒದಗಿಸಿದ್ದಾರೆ. ಅದೇ ರೀತಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೂ ತಮ್ಮ ಅನುದಾನವನ್ನು ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.

ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಪ್ರತಿನಿತ್ಯ ದಾಖಲಾಗುತ್ತಿರುವ ಕೊರೋನಾ ಸೋಂಕಿತರಿಗೆ ಬೆಡ್ ಮತ್ತು ಆಕ್ಸಿಜನ್ ಯಂತ್ರಗಳ ತೀವ್ರ ಕೊರತೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದರಾಗುವ ಅಪಾಯವಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೂ ಗಂಭೀರ ಗಮನ ನೀಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಇನ್ನಿತರ ಜನಪ್ರತಿನಿಧಿಗಳು ಈಗಲೇ ಕ್ರಮ ತೆಗೆದುಕೊಳ್ಳಬೇಕು. ಗಣೇಶ ಉತ್ಸವ ಬರುತ್ತಿರುವ ಈ ಸಂದರ್ಭದಲ್ಲಿ ಸೋಂಕು ತೀವ್ರವಾಗಿ ಹರಡುವ  ಸಾಧ್ಯತೆ ಇದೆ. ಈಗಲೇ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲೆ ದೊಡ್ಡ ಅಪಾಯವಾಗುವ ಸಂಭವವಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button