ಎಂ.ಕೆ.ಹೆಗಡೆ, ಬೆಳಗಾವಿ – ಈಚೆಗೆ ನಿಧನರಾಗಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಮಂಗಳವಾರ ಭೇಟಿ ನೀಡಲಿದ್ದಾರೆ.
ಮಂಗಳವಾರ ಬೆಳಗ್ಗೆ ಬೆಳಗಾವಿಗೆ ಆಗಮಿಸಲಿರುವ ಅವರು ಅಂಗಡಿಯವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.
ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ?
ಬೆಳಗ್ಗೆ 9 ಗಂಟೆಗೆ ನಳಿನಿ ಕುಮಾರ ಕಟೀಲು ಪ್ರವಾಸಿ ಮಂದಿರದಲ್ಲಿ ಬಿಜೆಪಿ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ. ಇದೊಂದು ಅನೌಪಚಾರಿಕ ಸಭೆಯಾಗಿದ್ದು, ಸುರೇಶ ಅಂಗಡಿಯವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ.
ಕ್ಷೇತ್ರದಲ್ಲಿ ಸಧ್ಯ ರಾಜಕೀಯ ಸ್ಥಿತಿಗತಿ, ಕಾಂಗ್ರೆಸ್ ನಿಂದ ಕಣಕ್ಕಿಳಿಯಬಹುದಾದ ಅಭ್ಯರ್ಥಿಯ ಕುರಿತು ಮಾಹಿತಿ, ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಮಾಹಿತಿ ಸಂಗ್ರಹಿಸಲಿದ್ದಾರೆ. ಬಿಜೆಪಿಯಿಂದ ಯಾರನ್ನು ಕಣಕ್ಕಿಳಿಸಿದರೆ ಪಕ್ಷ ಕ್ಷೇತ್ರವನ್ನು ಉಳಿಸಿಕೊಳ್ಳಬಹುದು. ಕನ್ನಡ -ಮರಾಠಿ ಎರಡೂ ಭಾಷಿಕರು ಒಪ್ಪಬಹುದಾದ ಅಭ್ಯರ್ಥಿ ಯಾರಿದ್ದಾರೆ ಎನ್ನುವ ಕುರಿತು ಅವರು ಸ್ಥಳೀಯ ಮುಖಂಡರೊಂದಿಗೆೆ ಚರ್ಚಿಸಲಿದ್ದಾರೆ ಎಂದು ಪ್ರಗತಿವಾಹಿನಿಗೆ ಮೂಲಗಳು ಮಾಹಿತಿ ನೀಡಿವೆ.
ಸುರೇಶ ಅಂಗಡಿಯವರ ಕುಟುಂಬಸ್ಥರೇ ಯಾರಾದರೂ ಆಸಕ್ತರಾಗಿದ್ದಾರಾ ಎನ್ನುವ ಕುರಿತೂ ಚರ್ಚಿಸಲಿದ್ದಾರೆ.
ಬಿಜೆಪಿಗೆ ಇದೊಂದು ಅನಿರೀಕ್ಷಿತ ಆಘಾತ ಮತ್ತು ಬೆಳವಣಿಗೆ. ಬೆಳಗಾವಿ ಕ್ಷೇತ್ರಕ್ಕೆ ಅಭ್ಯರ್ಥಿ ಹುಡುಕಬೇಕಾದ ಸಂದರ್ಭ ಸಧ್ಯ ಬರುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಅಂಗಡಿಯವರ ಹಠಾತ್ ಸಾವಿನಿಂದ ಅನಿವಾರ್ಯವಾಗಿ ಚುನಾವಣೆಗೆ ಸಿದ್ದರಾಗಲೇಬೇಕಾಗಿದೆ.
ಇನ್ನು 6 ತಿಂಗಳೊಳಗೆ ಕ್ಷೇತ್ರಕ್ಕೆ ಚುನಾವಣೆ ನಡೆಸಬೇಕಾಗುತ್ತದೆ. ಹಾಗಾಗಿ ಅಭ್ಯರ್ಥಿಯಾಗುವವರು ಕ್ಷೇತ್ರಕ್ಕೆ ಪರಿಚಯಿಸಿಕೊಳ್ಳಲು ಸಮಯಾವಕಾಶಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಬಿಜೆಪಿ ತಯಾರಿ ನಡೆಸಿದೆ.
ಈಗಾಗಲೆ ಬಂದಿರುವ ಮಾಹಿತಿ ಪ್ರಕಾರ ಹಲವಾರು ಆಕಾಂಕ್ಷಿಗಳು ಸಂಘದ ಪ್ರಮುಖರ ಮೂಲಕ ಲಾಬಿ ಆರಂಭಿಸಿದ್ದಾರೆ. 10ಕ್ಕೂ ಹೆಚ್ಚು ಜನರು ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ. ರಾಜ್ಯಸಭೆಯ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ, ಮಾಜಿ ಸಂಸದ ರಮೇಶ ಕತ್ತಿ, ಕರ್ನಾಟಕದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ನ್ಯಾಯವಾದಿ ಎಂ.ಬಿ.ಜಿರಲಿ, ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಕಾರ್ಯದರ್ಶಿ ಕಿರಣ ಜಾಧವ, ಸಾಮಾಜಿಕ ಕಾರ್ಯಕರ್ತ ವೀರೇಶ ಕಿವಡಸಣ್ಣವರ್, ಮಾಜಿ ಮಹಾನಗರ ಅಧ್ಯಕ್ಷ ರಾಜೇಂದ್ರ ಹರಕುಣಿ, ಮಾಜಿ ಶಾಸಕ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್, ಡಾ.ರವಿ ಪಾಟೀಲ ಮತ್ತಿತರರು ಆಸಕ್ತಿ ಹೊಂದಿದ್ದಾರೆ.
ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಸುದ್ದಿಯನ್ನೂ ಓದಿ – ಬಿಜೆಪಿಯಲ್ಲಿ ಆಗ್ಲೇ ಶುರುವಾಯ್ತು ಅಭ್ಯರ್ಥಿ ಚರ್ಚೆ – Updated
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ