ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹೃದಯ ಸಂಬಂಧಿ ಚಿಕಿತ್ಸೆಗೆ ದಾಖಲಾಗಿದ್ದು, ವೈದ್ಯರ ಸಲಹೆ ಮೇರೆಗೆ ಸಾರ್ವಜನಿಕ ಕಾರ್ಯಕ್ರಮಗಳಿಂದ ತಾತ್ಕಾಲಿಕವಾಗಿ ದೂರವಿರುವುದಾಗಿ ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಸಾವಿನ ಸುದ್ದಿಯಿಂದ ವಿಚಲಿತನಾಗಿದ್ದೇನೆ. ನನ್ನ ಪಾಲಿನ ಅತ್ಯಂತ ಪರಮಾಪ್ತರಾಗಿದ್ದ ಸುರೇಶ ಅಂಗಡಿಯವರ ಸಾವಿನ ಸುದ್ದಿ ನನ್ನ ಪಾಲಿಗೆ ಅತ್ಯಂತ ಕೆಟ್ಟದಾಗಿತ್ತು. ಆಪ್ತ ಒಡನಾಡಿಯ ಅಗಲುವಿಕೆಯಿಂದ ತೀವ್ರವಾಗಿ ನೊಂದುಕೊಂಡೆ ಎಂದು ಅವರು ತಿಳಿಸಿದ್ದಾರೆ.
ಸುರೇಶ ಅಂಗಡಿಯವರು ಮೃತಪಟ್ಟ ದಿನವೇ ಹೃದಯದ ಚಿಕಿತ್ಸೆಗೆ ಬೆಂಗಳೂರು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದೆ. ಅನಂತರ ಬೆಳಗಾವಿ ಆಗಮಿಸಿದ ಮೇಲೆ ಕೆಎಲ್ ಇ ಆಸ್ಪತ್ರೆಗೂ ತೆರಳಿ ಚಿಕಿತ್ಸೆ ಪಡೆದೆ. ವಾರ ಕಾಲದಿಂದ ಚಿಕಿತ್ಸೆ ಪಡೆಯುವಂತಾಗಿದ್ದರಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.
ಇದೀಗ ವೈದ್ಯರ ಸಲಹೆ-ಮಾರ್ಗದರ್ಶನ ಪಡೆದು ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳುತ್ತಿದ್ದೇನೆ. ಸುರೇಶ ಅಂಗಡಿಯವರ ಅಕಾಲಿಕ ಸಾವು ನನ್ನ ಪಾಲಿಗೆ ಅರಗಿಸಿಕೊಳ್ಳಲು ಅಸಾಧ್ಯವಾಗಿದ್ದು, ನಾಲ್ಕು ಸಲ ಸಂಸದರಾಗಿ, ಒಂದು ವರ್ಷದಿಂದ ಕೇಂದ್ರ ಸಚಿವರಾಗಿ ಅವರು ಮಾಡಿದ್ದ ಕೆಲಸ ಅಪ್ರತಿಮ. ಬೆಳಗಾವಿ ಸೇರಿದಂತೆ ಇಡೀ ಕರ್ನಾಟಕದ ಬಗ್ಗೆ ಅವರು ಕನಸು ಕಂಡುಕೊಂಡಿದ್ದರು. ಆದರೆ, ಅಷ್ಟರಲ್ಲೇ ಅವರಿಗೆ ಕೊರೋನಾ ರೂಪದಲ್ಲಿ ಬಂದೆರಗಿದ್ದ ಮೃತ್ಯು ಎಲ್ಲಾ ಕನಸುಗಳನ್ನು ನುಚ್ಚು ನೂರಾಗಿಸಿದೆ. ಬೆಳಗಾವಿ ಜಿಲ್ಲೆಯ ಜನ ಅವರ ಕೊಡುಗೆಯನ್ನು ಎಂದಿಗೂ ಮರೆಯಲಾರರು. ಬರುವ ದಿನಗಳಲ್ಲಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಬೆಳಗಾವಿ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಲಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ