Kannada NewsKarnataka News

ಸಿದ್ಧ ಸಮಾಧಿ ಯೋಗದ ನೂತನ ಕಟ್ಟಡಕ್ಕೆ 6 ಲಕ್ಷ ರೂ. ದೇಣಿಗೆ : ಬಾಲಚಂದ್ರ ಜಾರಕಿಹೊಳಿ

 ಪ್ರಗತಿವಾಹಿನಿ ಸುದ್ದಿ, ಗೋಕಾಕ : ಯೋಗ ಹಾಗೂ ಪ್ರಾಣಾಯಾಮದಿಂದ ಮಾತ್ರ ಎಲ್ಲ ದೀರ್ಘ ವ್ಯಾದಿಗಳನ್ನು ಬೇರು ಸಮೇತ ತೆಗೆದು ಹಾಕಲು ಸಾಧ್ಯವಿದೆ. ಮನ್ನಿಕೇರಿಯಲ್ಲಿ ನಿರ್ಮಾಣ ಮಾಡಲು ಉದ್ಧೇಶಿಸಿರುವ ಸಿದ್ಧ ಸಮಾಧಿ ಯೋಗ ತರಬೇತಿ ಕೇಂದ್ರಕ್ಕೆ ೬ ಲಕ್ಷ ರೂ.ಗಳನ್ನು ನೀಡುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ಮನ್ನಿಕೇರಿ ಗ್ರಾಮದ ಹೊರವಲಯದಲ್ಲಿರುವ ಗುರುದೇವ ದತ್ತ ಯೋಗಾ ಫೌಂಡೇಷನ್ ಆಶ್ರಯದಲ್ಲಿ ಸಿದ್ಧ ಸಮಾಧಿ ಯೋಗ(ಎಸ್‌ಎಸ್‌ವಾಯ್) ತರಬೇತಿ ಕೇಂದ್ರದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಧ್ಯಾನ, ಪ್ರಾಣಾಯಮ, ಆಸನಗಳು, ವ್ಯಕ್ತಿತ್ವ ವಿಕಸನ, ಕರ್ಮಯೋಗ ಮತ್ತು ಜ್ಞಾನ ಯೋಗಗಳನ್ನೊಳಗೊಂಡ ಸಿದ್ಧ ಸಮಾಧಿ ಯೋಗವು ಪ್ರತಿಯೊಬ್ಬರ ಜೀವನದಲ್ಲಿ ಸಂಜೀವಿನಿಯಾಗಿದೆ. ಯೋಗದ ವಿಧಿ ವಿಧಾನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಾವೊಂದೂ ರೋಗ-ಋಜಿನಗಳು ತಮ್ಮ ಬಳಿ ಸುಳಿಯುವದಿಲ್ಲವೆಂದು ಅವರು ಹೇಳಿದರು.
ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಬೆರೆಯಲು ಎಸ್‌ಎಸ್‌ವಾಯ್ ಇಂದಿಗೂ ಪ್ರಸ್ತುತವಾಗಿದೆ. ಕೋರೋನಾದಂತಹ ಸಮಯದಲ್ಲೂ ಯೋಗ ಮತ್ತು ಪ್ರಾಣಾಯಾಮವನ್ನು ಯಾರು ಮಾಡುತ್ತಿದ್ದಾರೆಯೋ ಅಂತವಹರಿಂದ ಮಹಾಮಾರಿ ದೂರ ಸರಿದಿದೆ. ಅಷ್ಟೊಂದು ಶಕ್ತಿಶಾಲಿ ಈ ಯೋಗ-ಪ್ರಾಣಾಯಾಮಕ್ಕಿದೆ. ಪ್ರತಿಯೊಬ್ಬರೂ ಯೋಗದತ್ತ ವಾಲಿದರೆ ತಮ್ಮ ಶರೀರ ಇಡೀ ದಿನ ನೆಮ್ಮದಿ ಹಾಗೂ ಶಾಂತಿಯಿಂದ ಇರುತ್ತದೆ ಎಂದು ಹೇಳಿದರು.
ಸಿದ್ಧ ಸಮಾಧಿ ಯೋಗ ಶಿಬಿರವನ್ನು ನಾಡಿನಾದ್ಯಂತ ಪಸರಿಸಲು ಋಷಿ ಪ್ರಭಾಕರ ಗುರೂಜಿ ಅವರ ಕೊಡುಗೆ ಅನನ್ಯವಾಗಿದೆ. ಇದರಿಂದ ಪ್ರೇರಣೆಗೊಂಡು ದೇಶದ ಉದ್ದಗಲಕ್ಕೂ ೧೦ ವರ್ಷಗಳ ಕಾಲ ಯೋಗದ ಅಧ್ಯಯನ ಮಾಡಿ ಅದರಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಿ ಮನೆ ಗುರುಗಳಾದ ಭಗವಾನ್ ವಿಶ್ವೇಶ್ವರ ಗುರುಗಳ ಆಶೀರ್ವಾದದಿಂದ ಮೌನವಾಗಿ ತಪಸ್ಸು ಮಾಡಿ ಅದ್ಭುತವಾದ ಜ್ಞಾನವನ್ನು ಕಂಡು ಹಿಡಿದು ಲಕ್ಷಾಂತರ ಶಿಷ್ಯರಿಗೆ ಎಸ್‌ಎಸ್‌ವಾಯ್ ನೀತಿ ಬೋಧನೆಗಳನ್ನು ಮಾಡಿರುವ ಕೀರ್ತಿ ಪ್ರಭಾಕರ ಗುರೂಜಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಹನಮಂತ ಗುರುಗಳು ಸುಮಾರು ಎರಡು ದಶಕಗಳ ಜ್ಞಾನವನ್ನು ಸಿದ್ಧ ಸಮಾಧಿ ಯೋಗದಲ್ಲಿ ಕಳೆದಿದ್ದು, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಜನರಿಗೆ ಮನ ಮುಟ್ಟುವಂತೆ ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ. ಗೋಕಾಕ ತಾಲೂಕಿನಲ್ಲಿ ಸಿದ್ಧ ಸಮಾಧಿ ಯೋಗ ಜ್ಞಾನವನ್ನು ನೀಡುತ್ತಿರುವ ಅವರು, ಮನ್ನಿಕೇರಿ ಗ್ರಾಮದಲ್ಲಿ ಸಮಾಧಿ ಯೋಗದ ಆಶ್ರಮ ಮಾಡಲು ಸಂಕಲ್ಪ ತೊಟ್ಟಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ. ತಮ್ಮ ಶಿಷ್ಯ ಬಾಂಧವರಿಂದ ೪ ಲಕ್ಷ ರೂ.ಗಳನ್ನು ಸಂಗ್ರಹಿಸಿರುವ ಗುರುಗಳಿಗೆ ವೈಯಕ್ತಿಕವಾಗಿ ೬ ಲಕ್ಷ ರೂ.ಗಳನ್ನು ದೇಣಿಗೆಯನ್ನಾಗಿ ನೀಡುತ್ತಿದ್ದೇನೆ ಎಂದು ಹೇಳಿದರು.
ಹನಮಂತ ಗುರು ಮಾತನಾಡಿ, ಕಳೆದ ೨೦ ವರ್ಷಗಳಿಂದ ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದಲ್ಲಿ ಎಸ್‌ಎಸ್‌ವಾಯ್ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಆದರೆ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಶಿಷ್ಯಂದಿರರು ಮನ್ನಿಕೇರಿ ಗ್ರಾಮದಲ್ಲಿ ಶಿಬಿರದ ಕಾರ್ಯಚಟುವಟಿಕೆ ನಡೆಸಲು ಆಶ್ರಮ ಆರಂಭಕ್ಕೆ ಸಹಕಾರ ನೀಡಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡೆವು. ಸಕಾರಾತ್ಮಕವಾಗಿ ಸ್ಪಂದಿಸಿರುವ ಬಾಲಚಂದ್ರ ಜಾರಕಿಹೊಳಿ ಅವರು, ಅಗತ್ಯವಿರುವ ೧.೩೦ ಎಕರೆ ಜಮೀನನ್ನು ಕೊಡಿಸಲು ಕಾರಣೀಕರ್ತರಾದರು. ನುಡಿದಂತೆ ನಡೆಯುತ್ತಿರುವ ಜನರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿರುವ ಕೊಡುಗೈ ದಾನಿ ಬಾಲಚಂದ್ರ ಜಾರಕಿಹೊಳಿ ಅವರು ರಾಜ್ಯದಲ್ಲಿಯೇ ಅಪರೂಪದ ಶಾಸಕರು. ತಮ್ಮ ಬಳಿ ಹೋದವರನ್ನು ಎಂದೂ ಬರಿಗೈಲಿ ಕಳುಹಿಸಿದ ಉದಾಹರಣೆಗಳಿಲ್ಲ. ಇವರೊಬ್ಬ ಆಧುನಿಕ ಕರ್ಣನೆಂದು ಗುಣಗಾನ ಮಾಡಿದರು.
ಗುರುಸಿದ್ಧ ಗುರು, ಪ್ರಮುಖರಾದ ಶಿದ್ಲಿಂಗ ಕಂಬಳಿ, ರವಿ ಪರುಶೆಟ್ಟಿ, ಶಾಂತಪ್ಪ ಹಿರೇಮೇತ್ರಿ, ಸುಭಾಸ ಕೌಜಲಗಿ, ಮುದಕಪ್ಪ ಗೋಡಿ, ಸತ್ತೆಪ್ಪ ಗಡಾದ, ಬಾಳಪ್ಪ ಗೌಡರ, ಕೆಂಪಣ್ಣಾ ಚೌಕಾಶಿ, ಲಕ್ಷ್ಮಣ ಸಂಕ್ರಿ, ಲಕ್ಷ್ಮಣ ಗಡಾದ, ಪುಂಡಲೀಕ ದಳವಾಯಿ, ಗುರುಪಾದ ರಾಮಣ್ಣಿ, ಬಸು ನಾಯ್ಕರ, ಲಕ್ಕಪ್ಪ ಕೊರಕಪೂಜೇರಿ, ಮಹಾಂತಯ್ಯಾ ಹಿರೇಮಠ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮನ್ನಿಕೇರಿ ಹೊರವಲಯದ ಮಳ್ಳಿಕೇರಿ ರಸ್ತೆಯಲ್ಲಿ ಸಿದ್ಧ ಸಮಾಧಿ ಯೋಗದ ತರಬೇತಿ ಕೇಂದ್ರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಸಿದ್ಧ ಸಮಾಧಿ ಯೋಗದ ನೂತನ ಕೇಂದ್ರಕ್ಕೆ ೬ ಲಕ್ಷ ರೂ.ಗಳನ್ನು ನೀಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಹನಮಂತ ಹಾಗೂ ಗುರುಸಿದ್ದ ಗುರುಗಳು ಸತ್ಕರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button