Kannada NewsKarnataka NewsLatest
ರೈತರಲ್ಲಿ ನವೋತ್ಸಾಹ ತುಂಬಿದ ಹರ್ಷ ಶುಗರ್ಸ್ ಎಂಡಿ ಚನ್ನರಾಜ ಹಟ್ಟಿಹೊಳಿಗೆ ಸನ್ಮಾನ
ಬಿಲ್ ಪಾವತಿ ವಿಳಂಬವಿಲ್ಲ – ಚನ್ನರಾಜ ಭರವಸೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಅವರನ್ನು ಆ ಭಾಗದ ರೈತರು ಸೋಮವಾರ ಸಂಜೆ ಆತ್ಮೀಯವಾಗಿ ಸನ್ಮಾನಿಸಿದರು.
ಹರ್ಷ ಶುಗರ್ಸ್ ಆರಂಭವಾದ ನಂತರ ಈ ಭಾಗದ ರೈತರ ಜೀವನವೇ ಬದಲಾಗಿದೆ. ರೈತರಲ್ಲಿ ನವೋತ್ಸಾಹ ಮೂಡಿದೆ. ಮೊದಲು ಕಬ್ಬು ಬೆಳೆಯದ ರೈತರೂ ಈಗ ಕಬ್ಬು ಬೆಳೆದು ಸಕಾಲಕ್ಕೆ ಸೂಕ್ತವಾದ ಬೆಲೆ ಪಡೆಯುತ್ತಿದ್ದೇವೆ ಎಂದು ರೈತಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿ, ನಿಜ ಅರ್ಥದಲ್ಲಿ ಹರ್ಷ ಶುಗರ್ಸ್ ನಮ್ಮಲ್ಲಿ ಜೀವತುಂಬಿದೆ ಎಂದರು.
ಸವದತ್ತಿ ತಾಲೂಕಿನ ಈ ಭಾಗದಲ್ಲಿ ಹೆಚ್ಚಿನ ರೈತರು ಕಬ್ಬು ಬೆಳೆಯುತ್ತಿರಲಿಲ್ಲ. ಹತ್ತಿರದಲ್ಲಿ ಕಾರ್ಖಾನೆ ಇರಲಿಲ್ಲ. ದೂರ ಸಾಗಿಸಿದರೂ ಸರಿಯಾದ ಸಮಯಕ್ಕೆ ಬಿಲ್ ಸಿಗುತ್ತಿರಲಿಲ್ಲ. ಹಾಗಾಗಿ ಕಬ್ಬಿನ ಬದಲು ಬೇರೆ ಬೆಳೆಗಳಿಗೆ ಮೊರೆ ಹೋಗಿದ್ದರು. ಹರ್ಷ ಶುಗರ್ಸ್ ಆರಂಭವಾದ ನಂತರದಲ್ಲಿ ಹೆಚ್ಚಿನ ರೈತರು ಕಬ್ಬಿನತ್ತ ಆಕರ್ಷಿತರಾಗಿದ್ದಾರೆ. ಸೂಕ್ತವಾದ ಬೆಲೆಯನ್ನು ಒದಗಿಸಿ, ನಿಗದಿತ ಸಮಯದಲ್ಲಿ ಕಬ್ಬುಗಳನ್ನು ಕಟಾವುಗೊಳಿಸಿ ರೈತರೆಲ್ಲ ಸಂತಸಗೊಳ್ಳುವಂತಾಗಿದೆ ಎಂದು ರೈತರು ಹೇಳಿದರು.
ಹರ್ಷ ಶುಗರ್ಸ್ ಈ ಭಾಗದ ರೈತರನ್ನು ಕುಟುಂಬದವರಂತೆ ಕಾಣುತ್ತಿದೆ, ಕಬ್ಬಿನ ಬೆಳೆಯಿಂದಾಗಿ ಒಳ್ಳೆಯ ಲಾಭವಾಗುತ್ತಿದೆ. ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದು ರೈತ ಮುಖಂಡರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, ಸ್ವಾರ್ಥವಿಲ್ಲದೆ, ಮಳೆ, ಬಿಸಿಲು, ಚಳಿ ಎನ್ನದೆ ನಿರಂತರ ದುಡಿಯುವ ರೈತರ ಮುಖದಲ್ಲಿ ಸದಾ ನಗು ಇರಬೇಕು ಎನ್ನುವುದೇ ನಮ್ಮ ಆಶಯ. ಅದಕ್ಕಾಗಿ ಹರ್ಷ ಶುಗರ್ಸ್ ಎಲ್ಲ ರೀತಿಯಿಂದಲೂ ಪ್ರಯತ್ನಿಸಲಿದೆ. ಕಾರ್ಖಾನೆಗೆ ಕಬ್ಬು ಪೂರೈಸುವ ರೈತರು ಬಿಲ್ ಪಾವತಿಗಾಗಿ ಒಂದು ದಿನವೂ ಕಾಯುವಂತಾಗಬಾರದು. ಹಾಗಾಗಿ ಸಕಾಲದಲ್ಲಿ ಹಣ ಪಾವತಿಸುವ ವ್ಯವಸ್ಥೆ ಮಾಡಿದ್ದೇವೆ. ನಿಮ್ಮ ಈ ಪ್ರೀತಿ, ಪ್ರೋತ್ಸಾಹ, ಸನ್ಮಾನಕ್ಕೆ ನಾವೆಂದೂ ಚಿರಋಣಿಯಾಗಿರುತ್ತೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ