ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೋಷರಹಿತ ಮತದಾರರ ಪಟ್ಟಿಯು ಪ್ರಜಾತಂತ್ರದ ಬೆನ್ನೆಲಬು. ಆದ್ದರಿಂದ ಯಾವುದೇ ಕಾರಣ ನೀಡದೇ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸಕಾಲಕ್ಕೆ ವಿಲೇವಾರಿ ಮಾಡಬೇಕು ಎಂದು ರಾಜ್ಯದ ಮುಖ್ಯ ಚುನಾವಣಧಿಕಾರಿಗಳಾದ ಡಾ.ಸಂಜೀವ್ ಕುಮಾರ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಫೆ.9) ನಡೆದ ಮತದಾರರ ಪಟ್ಟಿಯ ಸೂಪರ್ ಚೆಕ್ಕಿಂಗ್ ಹಾಗೂ ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫಾರ್ಮ್ 6, 6ಎ ಹಾಗೂ 8 ಸೇರಿದಂತೆ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡಬೇಕು. ಬಾಕಿ ಉಳಿದಿರುವ ಒಟ್ಟಾರೆ 7756 ಅರ್ಜಿಗಳನ್ನು ಕೂಡಲೇ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಯಾವುದೇ ಕ್ಷಣದಲ್ಲಿ ಉಪ ಚುನಾವಣೆ ಘೋಷಣೆಯಾಗಬಹುದು. ಆದ್ದರಿಂದ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿ ಒಂದು ವಾರದೊಳಗೆ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಅದೇ ರೀತಿ ವಿಕಲಚೇತನರ ಮತದಾರರ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಗೆ ಆದ್ಯತೆ ನೀಡಬೇಕು ಎಂದು ಡಾ.ಸಂಜೀವ್ ಕುಮಾರ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಮಾರ್ಗಸೂಚಿ ಪ್ರಕಾರ ಪೂರ್ಣಗೊಳಿಸಲಾಗಿದೆ. ಕೊರೊನಾ ಮಧ್ಯೆಯೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಯುವ ಮತದಾರರಿಗೆ ಉಚಿತವಾಗಿ ಎಪಿಕ್ ಕಾರ್ಡ್ ವಿತರಿಸಲಾಗಿದೆ. 38.57 ಮತದಾರರಿದ್ದಾರೆ ಸುಮಾರು 31 ಸಾವಿರ ಜನ ಹೊಸ ಮತದಾರರಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್ ಸೇರಿದಂತೆ ಸಂಬಂಧಿಸಿದ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಉಪ ಚುನಾವಣೆಗೆ ಸಿದ್ಧತೆ ಪೂರ್ಣ:
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯದ ಮುಖ್ಯ ಚುನಾವಣಧಿಕಾರಿ ಡಾ.ಸಂಜೀವ್ ಕುಮಾರ್ ಅವರು, ಮುಂಬರಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು. ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ, ಇವಿಎಂ ಪರಿಶೀಲನೆ, ಸಿಬ್ಬಂದಿ ಆಯ್ಕೆ ಮತ್ತು ತರಬೇತಿ ಸೇರಿದಂತೆ ಎಲ್ಲವನ್ನೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೋವಿಡ್ ಸೋಂಕಿತರಿಗೆ ಪೋಸ್ಟಲ್ ಬ್ಯಾಲೆಟ್:
ವಿಕಲಚೇತನರು, 80 ವರ್ಷ ಮೇಲ್ಪಟ್ಟವರು ಹಾಗೂ ಕೋವಿಡ್-೧೯ ಸೋಂಕಿತರಿಗೆ ಪೋಸ್ಟಲ್ ಬ್ಯಾಲೆಟ್ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಅಗತ್ಯವಾಗಿರುವ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಎಪಿಕ್ ಕಾರ್ಡುಗಳನ್ನು ಬೇಗನೇ ವಿತರಿಸಬೇಕು ಎಂದು ಸೂಚನೆ ಮಾಡಲಾಗಿದೆ. ಉಪ ಚುನಾವಣೆಗೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಬಾಕಿ ಇರುವ ಅರ್ಜಿಗಳನ್ನು ಒಂದು ವಾರದೊಳಗೆ ವಿಲೇವಾರಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಗೆ ಹೆಸರು ಸೇರ್ಪಡಗೆ ಅವಕಾಶ. ಅಂತಿಮ ಪಟ್ಟಿಯಲ್ಲಿ 38,57,982 ಮತದಾರರಿದ್ದಾರೆ. ಇದರಲ್ಲಿ 19 ಸಾವಿರಕ್ಕೂ ಅಧಿಕ ಸೇವಾ ಮತದಾರರಿದ್ದಾರೆ.
ಹೊಸ ಮತದಾರರಿಗೆ ಎಪಿಕ್ ಕಾರ್ಡ್ ವಿತರಣೆ ಆರಂಭಗೊಂಡಿದೆ. ಒಂದು ವಾರದಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ನಾಮಪತ್ರ ಹಿಂಪಡೆಯುವವರೆಗೆ ಸೇರ್ಪಡೆಗೆ ಅವಕಾಶ. ಆದಾಗ್ಯೂ ಅರ್ಹ ಮತದಾರರು ಮುಂಚಿತವಾಗಿಯೇ ಹೆಸರು ಸೇರ್ಪಡೆಗೆ ಮುಂದಾಗಬೇಕು.
ಶಿರಾ ಹಾಗೂ ಆರ್.ಆರ್.ನಗರ ಉಪ ಚುನಾವಣೆಯಲ್ಲಿ ವಿಕಲಚೇತನರಿಗೆ ಪೋಸ್ಟಲ್ ಬ್ಯಾಲೆಟ್ ನೀಡಲಾಗಿತ್ತು. ಆದ್ದರಿಂದ ಜಿಲ್ಲೆಯ ವಿಕಲಚೇತನರ ಹೆಸರು ಮತದಾರರ ಪಟ್ಟಿಯಲ್ಲಿ ವಿಕಲಚೇತನರು ಎಂದು ನಮೂದಿಸಿದ್ದರೆ ಮನೆಗೆ ತೆರಳಿ ಪೋಸ್ಟಲ್ ಬ್ಯಾಲೆಟ್ ನೀಡಲು ಕ್ರಮ ಕೈಗೊಳ್ಳಲಾಗುವುದು.
ಚುನಾವಣಾ ಅಕ್ರಮಗಳ ಮೇಲೆ ನಿಗಾ ವಹಿಸಲು ಸಿವಿಜಿಲ್ ಆಪ್ ಅಭಿವೃದ್ಧಿಪಡಿಸಲಾಗಿದೆ. ಅದರ ಮೂಲಕ ಅಕ್ರಮ ಪತ್ತೆ ಮತ್ತು ತಡೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಡಾ.ಸಂಜೀವ್ ಕುಮಾರ್ ಸ್ಪಷ್ಟಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ