Latest

ಸಿದ್ದರಾಮಯ್ಯ ಸ್ವತಂತ್ರ ಪಕ್ಷ ಕಟ್ಟಿ ಗೆದ್ದು ತೋರಿಸಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪದೇ ಪದೇ ಜೆಡಿಎಸ್ ಗೆ ಶಕ್ತಿ ಇಲ್ಲ, ಉತ್ತರ ಕರ್ನಾಟಕ ಭಾಗದ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ ಎಂದು ಹೇಳಿಕೆ ನೀಡುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲವಾಗಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ನಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಿ, ಹೊರಬಿದ್ದ ಮೇಲೆ ಸಿದ್ದರಾಮಯ್ಯ‌ನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಹೇಳಿದ್ದಾರೆ.

ಸರಣಿ ಟ್ವೀಟ್ ಮೂಲಕ ಗುಡುಗಿರುವ ಕುಮಾರಸ್ವಾಮಿ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಗೆ ಇರುವ ಶಕ್ತಿ ಮತ್ತು ಸಾಮರ್ಥ್ಯ ಪ್ರದರ್ಶನಕ್ಕೆ ಇನ್ನೂ ಸಮಯವಿದೆ. ವೇದಿಕೆಯೂ ಸಿಗಲಿದೆ. ಆಗ ಸಿದ್ದರಾಮಯ್ಯನವರು ನಮ್ಮ ಜೊತೆ ಚರ್ಚೆಗೆ, ಸೆಣಸಾಟಕ್ಕೆ ಬರಲಿ. ಒಂದುವೇಳೆ ಅವರೇ ಒಂದು ಪಕ್ಷವನ್ನೇನಾದರೂ ಕಟ್ಟಿದರೆ ಅದಕ್ಕೂ ಜೆಡಿಎಸ್ ನ ಸಾಮರ್ಥ್ಯ ತೋರಿಸುವ ಕೆಲಸ ಮಾಡಿ. ಉಪಚುನಾವಣೆಗಳು ಅಧಿಕಾರಸ್ಥರ, ದುಡ್ಡಿರುವವರ ಚುನಾವಣೆಗಳು. ಈ ಚುನಾವಣೆಗಳು ನಡೆಯುವ ರೀತಿಯೇ ಬೇರೆ. ಪ್ರತಿಷ್ಠೆಯ ಈ ಹೋರಾಟದಲ್ಲಿ ಸ್ಪರ್ಧಿಸದೇ ಇರುವ ಪಕ್ಷವೊಂದರ ನಿಲುವನ್ನು ಟೀಕಿಸುವ ಮುನ್ನ ಯಾರೇ ಆದರೂ ಯೋಚಿಸಬೇಕು. ಇಲ್ಲವಾದರೆ ಟೀಕೆಯೇ ಅವರಿಗೆ ಮುಳುವಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ‌.

Home add -Advt

ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ‌. ಆದರೆ, ಬೇರೆ ಪಕ್ಷಗಳಿಗೆ ಬೆಂಬಲ ನೀಡುತ್ತೇವೆ ಎಂದೇನಾದರೂ ಹೇಳಿದ್ದಾರಾ? ಉಪಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದ ಇತಿಹಾಸ ಇರುವುದು ಜೆಡಿಎಸ್ಗಲ್ಲ, ತಮಗೆ? 2008ರಲ್ಲಿ ನಡೆದ ಆಪರೇಷನ್ ಕಮಲದ ಉಪಚುನಾವಣೆಗಳಲ್ಲಿ ನೀವು ಮಾಡಿದ ಕುತಂತ್ರಗಳನ್ನು ನೆನಪಿಸಲೇ?

ಸಿದ್ದರಾಮಯ್ಯನವರು ಸ್ವತಂತ್ರ ಪಕ್ಷ ಕಟ್ಟಿ, ತಾವೂ ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಿ ಆಮೇಲೆ ಜೆಡಿಎಸ್ ಬಗ್ಗೆ, ಜೆಡಿಎಸ್ ನಾಯಕತ್ವದ ಬಗ್ಗೆ ಮಾತಾಡಬೇಕು ಎಂದು ಸವಾಲು ಹಾಕುತ್ತಲೇ ಬಂದಿದ್ದೇನೆ. ಸವಾಲು ಸ್ವೀಕರಿಸಲಾಗದ ಸಿದ್ದರಾಮಯ್ಯ, ಜೆಡಿಎಸ್ ಅನ್ನು ಟೀಕಿಸುವುದರಲ್ಲಿ ತಮ್ಮ ಶಕ್ತಿಯ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Related Articles

Back to top button