Latest

ಜಿಲ್ಲಾಧಿಕಾರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ; ಹೊಸ ಜಿಲ್ಲಾಧಿಕಾರಿಗೆ ಸ್ವಾಗತ

ಪ್ರಗತಿವಾಹಿನಿ ಸುದ್ದಿ, ಕಾರವಾರ -: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರಾಗಿ ನಿಯೋಜಿತರಾಗಿರುವ ನಿರ್ಗಮಿತ ಜಿಲ್ಲಾಧಿಕಾರಿ ಡಾ. ಕೆ. ಹರೀಶ ಕುಮಾರ ಅವರನ್ನು ಉತ್ತರ ಕನ್ನಡ ಜಿಲ್ಲಾಡಳಿತ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬಿಳ್ಕೊಡಲಾಯಿತು.

ಸನ್ಮಾನ ಸ್ವೀಕರಿಸಿದ  ಡಾ. ಹರೀಶಕುಮಾರ ಕೆ. ಅವರು ಮಾತನಾಡಿ, ವರ್ಗಾವಣೆ ಜೀವನದ ಒಂದು ಭಾಗ. ಇಷ್ಟವಿದ್ದರೂ ಇಲ್ಲದಿದ್ದರೂ ಅದಕ್ಕೆ ಒಗ್ಗಿಕೊಳ್ಳಲೇಬೇಕು. ಹೊಸದಾಗಿ ವರ್ಗಾವಣೆಯಾದ ಅಧಿಕಾರಿಗಳಿಗೆ ಹೊಸ ಸ್ಥಳಗಳ ಬಗೆಗೆ ತಿಳಿಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಸಿಕ್ಕ ಸ್ವಲ್ಪ ಸಮಯದಲ್ಲಿ ಎಲ್ಲ ವಿಷಯಗಳ ಕುರಿತು ತಿಳಿದುಕೊಳ್ಳುವ ಮನೋಭಾವ ಬೇಳಸಿಕೊಳ್ಳಬೇಕು ಎಂದರು.
ನೆರೆ ಹಾವಳಿ ಕುರಿತು ಗಂಧಗಾಳಿಯೂ ಗೊತ್ತಿರದ ಸಂದರ್ಭದಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಮಾರ್ಗದರ್ಶನ ನೀಡಿದ್ದರು. ಮುಂದೆ ನಾನು ಉತ್ತರ ಕನ್ನಡ ಜಿಲ್ಲಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದಾಗ ಸಹಕಾರಿಯಾಯಿತು. ಸರಕಾರಿ ನೌಕರರಿಗೆ ವೃತ್ತಿ ಜೀವನದಲ್ಲಿ ಪ್ರತಿಯೊಂದು ಸಮಯ, ಸಂದರ್ಭಗಳಲ್ಲಿ ಅನುಭವಿಸುವ ಅನುಭವ ಅತ್ಯಂತ ಮಹತ್ವದ್ದಾಗಿದೆ. ಇದರಿಂದ ಉನ್ನತ ಹುದ್ದೆಗೇರುವ ಅವಕಾಶಗಳು ಸಿಗುತ್ತವೆ. ಅನುಭವದ ಮೂಲಕ ಜಿಲ್ಲೆಯಲ್ಲಿ ಸಂಭವಿಸುವಂತ ಘಟನೆಗಳಿಗೆ ಒಂದು ಉತ್ತಮ ನಿರ್ಧಾರ ಕೈಗೊಳ್ಳಬಹುದು. ಇದು ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ. ನಮ್ಮ ವಿಚಾರ ಮತ್ತು ಕಾರ್ಯವೈಖರಿ ಸುತ್ತಮುತ್ತಲಿನ ಜನರಿಗೆ ಪ್ರೇರಣೆಯಾಗುತ್ತದೆ. ಜನರಿಗಾಗಿ ಬದುಕುವುದು ಸೇವೆಯಲ್ಲಿ ಮಾತ್ರವಿರಬೇಕು. ಅದನ್ನ ಜೀವನಕ್ಕೆ ಅಳವಡಿಸಿಕೊಳ್ಳಬಾರದು. ಯಾಕಂದರೆ ಜನರು ಎಲ್ಲವನ್ನೂ ಮರೆತುಬಿಡುತ್ತಾರೆ.
ಅಧಿಕಾರದ ಅವಧಿಗಳಲ್ಲಿ ಬೇರೆ ಬೇರೆ ಸಂದರ್ಭಗಳು, ಸಮಸ್ಯೆಗಳು ಇರುತ್ತವೆ. ನಾನು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗ ಬೇರೆಯಾದ ವ್ಯವಸ್ಥೆಯಿತ್ತು. ನನ್ನ ಅವಧಿಯಲ್ಲಿ ಜಿಲ್ಲೆಯಾದ್ಯಂತ ಕೈಗೊಂಡ ಕಾರ್ಯಗಳು ಮುಂದಿನ ದಿನಗಳಲ್ಲಿ ಸ್ಥಗಿತವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಚುನಾವಣೆಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, . ಚುನಾವಣಾ ಆಯೋಗದಿಂದ ಉತ್ತಮ ಕಾರ್ಯಕ್ಕೆ ಪ್ರಶಸ್ತಿ ಲಭಿಸಿದೆ. ಅಧಿಕಾರವಧಿಯಲ್ಲಿ ಭ್ರಷ್ಟಾಚಾರ, ಅಕ್ರಮ, ಕುಡಿಯುವ ನೀರಿನ ಸಮಸ್ಯೆ ಎಂದೂ ಎದ್ದು ಕಾಣಲಿಲ್ಲ ಎಂದು ಹೇಳಿದರು.
ನೂತನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ಮಾತನಾಡಿ, ಹಲವಾರು ಕಡೆಗಳಲ್ಲಿ ಕಾರ್ಯ ನಿರ್ವಹಿಸಿದ್ದರೂ ನನಗೆ ಡಾ. ಹರೀಶಕುಮಾರ ಅವರ ಆಡಳಿತ ವೈಖರಿಯ ಅನುಭವಗಳು ವಿಭಿನ್ನವಾಗಿವೆ ಕಂಡಿವೆ. ಜಿಲ್ಲೆಯಲ್ಲಿ ಅವರು ಕೈಗೊಂಡ ಎಲ್ಲ ಪ್ರಗತಿ ಕಾರ್ಯಗಳನ್ನ ಮುಂದುವರೆಸುವ ಭರವಸೆ ನೀಡುತ್ತೇನೆ. ಜಿಲ್ಲೆಯ ಎಲ್ಲ ಅಧಿಕಾರಿಗಳ ಸಹಾಯ, ಸಹಕಾರದೊಂದಿಗೆ ಉತ್ತಮ ಆಡಳಿತ ನೀಡಲು ಪ್ರಯತ್ನಿಸುವೆ. ಡಾ. ಹರೀಶಕುಮಾರ ಅವರ ಮುಂದಿನ ವೃತ್ತಿ ಜೀವನಕ್ಕೆ ಒಳ್ಳೆಯದಾಗಲಿ. ಅವರ ವೈಯಕ್ತಿಕ ಜೀವನವೂ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಎಸ್‌ಪಿ ಶಿವಪ್ರಕಾಶ್ ದೇವರಾಜು ನಿರ್ಗಮಿತ ಜಿಲ್ಲಾಧಿಕಾರಿ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡು, ನೆರೆ ಹಾವಳಿ, ಚುನಾವಣೆ, ಕೋವಿಡ್-೧೯ ಸೇರಿದಂತೆ ವಿವಿಧ ಕಷ್ಟಕರ ಸಂದರ್ಭದಲ್ಲಿ ಡಾ. ಹರೀಶಕುಮಾರ ಕೆ. ಅವರು ಉತ್ತಮವಾಗಿ ಆಡಳಿತ ನಿಭಾಸಿದ್ದಾರೆ. ಮುಖ್ಯಮಂತ್ರಿ ಕಚೇರಿಯಿಂದಲೂ ಪ್ರಶಂಸೆ ಬಂದಿದೆ. ರಾಜ್ಯದ ಬೇರೆ ಜಿಲ್ಲೆಗಳಿಗಿರುವ ಆಸ್ಪತ್ರೆ ವ್ಯವಸ್ಥೆಯೂ ಇರಲಿಲ್ಲ. ಆದರೂ ಪ್ರತಿಯೊಂದು ವಿಷಯ ಹಾಗೂ ಸಮಸ್ಯೆಗಳನ್ನು ಅತ್ಯಂತ ಕಷ್ಟಪಟ್ಟು ಸರಳ ರೀತಿಯಲ್ಲಿ ಬಗೆಹರಿಸಲು ಶ್ರಮಿಸಿದರು.
ಸಾಮಾನ್ಯ ಹಾಗೂ ಕ್ಲಿಷ್ಟಕರ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವುದು ಅತ್ಯಂತ ಕಷ್ಟದ ಕೆಲಸವಾಗಿರುತ್ತದೆ. ಆದರೆ ಅಂತಹ ಸಂದರ್ಭಗಳನ್ನು ಸೂಕ್ಷ್ಮ ರೀತಿಯಲ್ಲಿಯೇ ಯೋಚನೆ ಮಾಡಿ ನಿರ್ಧಾರ ಕೈಗೊಂಡಿದ್ದಾರೆ. ಸ್ನೇಹಪರ ಜೀವಿಯಾಗಿ ಅಧಿಕಾರಿಗಳ ಜೊತೆಗೆ ಪರಸ್ಪರ ಸಂಬಂಧದಿಂದ ಕಾರ್ಯ ನಿರ್ವಹಿಸಿದ್ದಾರೆ. ಅವರ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಎಂದರು.
ಜಿಲ್ಲಾಪಂಚಾಯತ್ ಸಿ ಇ ಒ ಪ್ರಿಯಾಂಗಾ ಎಮ್ ಅವರು ಮಾತನಾಡಿ, ಡಾ. ಹರೀಶಕುಮಾರ ಕೆ ಅವರು ನಾಯಕತ್ವ ಗುಣವನ್ನ ಒಳಗೊಂಡ ಅಧಿಕಾರಿಯಾಗಿದ್ದಾರೆ. ಜಿಲ್ಲೆಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ನಿರ್ಭೀತಿಯಿಂದ ನಿರ್ಧಾರ ಕೈಗೊಳ್ಳಲು ಇತರೆ ಅಧಿಕಾರಿಗಳಿಗೂ ಅವಕಾಶ ನೀಡಿದ್ದರು. ಉನ್ನತ ಅಧಿಕಾರಿಗಳು ಹೇಗೆಲ್ಲ ನಿರ್ಧಾರ ಕೈಗೊಂಡರೆ ಜನರಿಗೆ ಒಳ್ಳಯದಾಗುತ್ತೆ ಎಂಬುವುದರ ಬಗೆಗೆ ತಿಳುವಳಿಕೆ ನೀಡುತ್ತಿದ್ದರು. ಅವರದೇ ಆದ ಕಾರ್ಯ ಶೈಲಿಯಿಂದ ಕಾರ್ಯ ನಿರ್ವಹಿಸಿ ಜನರಿಗೆ, ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. ಪ್ರತಿಯೊಂದು ವಿಷಯದ ಕುರಿತು ಸೂಕ್ತ ತಯಾರಿಕೆಯಿಂದ ಕೆಲಸ ಮಾಡುತ್ತಿದ್ದರು. ಅವರ ಮುಂದಿನ ಕೆಲಸ, ಕಾರ್ಯಗಳಿಗೆ ಒಳ್ಳೆಯದಾಗಲಿ. ಜನಪರ ಕಾರ್ಯಗಳಿಂದ ಹೆಚ್ಚಿನ ಮಟ್ಟದಲ್ಲಿ ಗುರುತಿಸಿಕೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾರವಾರ ಎಸಿ ವಿದ್ಯಾಶ್ರೀ ಚಂದರಗಿ, ಶಿರಸಿ ಎಸಿ ಆಕೃತಿ ಬನ್ಸಾಲ್, ಪತ್ರಕರ್ತರು ಹಾಗೂ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button