
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ತಾತ್ಕಾಲಿಕ ತೆರೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಂದಿನ 6 ತಿಂಗಳ ಕಾಲ ಹೋರಾಟ ಕೈಬಿಡುವಂತೆ ಪಂಚಮಸಾಲಿ ಸ್ವಾಮೀಜಿಗಳಿಗೆ ಮನವಿ ಮಾಡಿದ್ದಾರೆ.
ಇಂದು ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭೆಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಯತ್ನಾಳ್ ಮಾತನಾಡಲು ಆರಂಭಿಸಿದರು. ಮಧ್ಯಪ್ರವೇಶಿಸಿದ ಸಿಎಂ ಯಡಿಯೂರಪ್ಪ, ಮೀಸಲಾತಿ ಕುರಿತು ಹಿಂದುಳಿದ ಆಯೋಗದ ವರದಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ವರದಿಯನ್ನು 6-7 ತಿಂಗಳಲ್ಲಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಈ ಬಗ್ಗೆ ಶಾಸಕ ಯತ್ನಾಳ್ ಅವರಿಗೆ ಭರವಸೆ ನೀಡುತ್ತೇನೆ ಎಂದು, ಪಂಚಮಸಾಲಿ ಹೋರಾಟವನ್ನು ಕೈಬಿಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಹಿಂದುಳಿದ ವರ್ಗಗಳ ವರದಿ ಒಪ್ಪಿ ಸರ್ಕಾರ ಮೀಸಲಾತಿ ನೀಡಲಿ. ಸಿಎಂ ಸ್ಪಷ್ಟ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಗಳಿಗೆ ಮನವಿ ಮಾಡುತ್ತಿದ್ದೇನೆ. 6 ತಿಂಗಳ ಕಾಲ ಕಾಯೋಣ. ಅಲ್ಲಿಯವರೆಗೆ ಹೋರಾಟ ಕೈಬಿಡುವಂತೆ ಮನವಿ ಮಾಡುವುದಾಗಿ ತಿಳಿಸಿದರು. ಇದಕ್ಕೆ ಸ್ಪೀಕರ್ ಕಾಗೇರಿ ಕೂಡ ಸಿಎಂ ಭರವಸೆ ಸ್ಪಷ್ಟವಾಗಿದೆ. ಸ್ವಾಮೀಜಿಗಳು ಧರಣಿ ನಿಲ್ಲಿಸಲಿ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ