Kannada NewsLatest

ವಿಧಾನಸೌಧ ಆವರಣದಲ್ಲಿ ಬಸವಣ್ಣ ಪುತ್ಥಳಿ ಸ್ವಾಗತಾರ್ಹ ಕ್ರಮ: ಡಾ.ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವಗುರು, ಮಹಾ ಮಾನವತಾವಾದಿ ಬಸವಣ್ಣನವರ ಪುತ್ಥಳಿಯನ್ನು ಕರ್ನಾಟಕದ ಶಕ್ತಿಕೇಂದ್ರ ಹಾಗೂ ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪಿಸುವ ಸೂಕ್ತ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪ ಕೈಗೊಂಡಿರುವುದು ಸಮಸ್ತ ನಾಡಿನ ಬಸವಾಭಿಮಾನಿಗಳಿಗೆ ಅತ್ಯಾನಂದ ಹಾಗೂ ಹರ್ಷವನ್ನುಂಟುಮಾಡಿದೆ ಎಂದು ಕೆಎಲ್‍ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.

12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಪಟದ ಮೂಲಕ ಸಮಷ್ಟಿ ಜನಾಂಗದ ಏಳ್ಗೆಗಾಗಿ ಶ್ರಮಿಸಿದರು. ಸಮಾಜದಲ್ಲಿ ಬೇರುಬಿಟ್ಟಿದ್ದ ವರ್ಣ-ಜಾತಿ-ವರ್ಗ-ಲಿಂಗ ಅಸಮಾನತೆಯನ್ನು ಕಿತ್ತುಹಾಕಿ ಸರ್ವಸಮಾನತೆಯ ಸಮಾಜವನ್ನು ರೂಪಿಸಿದವರು ಬಸವಣ್ಣನವರು. ವ್ಯಕ್ತಿ ಕಲ್ಯಾಣದೊಂದಿಗೆ ಸಮಾಜ ಕಲ್ಯಾಣಕ್ಕೆ ಹೋರಾಡಿದರು. ಕಾಯಕ-ದಾಸೋಹದ ಮೂಲಕ ಸಮಾಜೋಧಾರ್ಮಿಕ ಚಳವಳಿಯನ್ನು ಹುಟ್ಟುಹಾಕಿದರು. ಅಂತಹ ಸಮಾಜಸುಧಾರಕ ಬಸವಣ್ಣನವರನ್ನು ಪಡೆದ ಕರ್ನಾಟಕವೇ ಧನ್ಯ.

ವಿಶ್ವಸಂದೇಶವನ್ನು ನೀಡಿದ ಬಸವಣ್ಣನವರ ವಿಚಾರಗಳಿಗೆ ಇಂದು ಜಗತ್ತಿನ ಹಲವಾರು ದೇಶಗಳು ಮಾರುಹೋಗಿವೆ. ಅಂತೆಯೆ ಲಂಡನ್ ಲ್ಯಾಮ್‍ಬೆಥ್‍ನಗರ ಥೀಮ್ಸ್ ನದಿಯ ತೀರದಲ್ಲಿ ಬಸವಣ್ಣನವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಅಷ್ಟೇ ಅಲ್ಲದೆ ನಮ್ಮ ದೇಶದ ಸಂಸತ್‍ನ ಎದುರುಗಡೆ ಗುರು ಬಸವಣ್ಣನವರ ಅಶ್ವಾರೂಢಿ ಪ್ರತಿಮೆಯೂ ಸಮಾನತೆಯ ಧ್ಯೋತ್ಯಕವಾಗಿ ನಿಂತಿದೆ. ಕೇಂದ್ರ ಸರ್ಕಾರವು ಬಸವಣ್ಣನವರ ವಚನಗಳನ್ನು ದೇಶದ 22 ಭಾಷೆಗಳಲ್ಲಿ ಪ್ರಕಟಿಸಿದೆ. ಬಸವಣ್ಣನವರ ನಾಣ್ಯಗಳನ್ನು ಹೊರತಂದಿದೆ. ಹೀಗೆ ಕಾಲಕಾಲಕ್ಕೆ ಬಸವಣ್ಣನವರ ಜೀವನ ಸಂದೇಶಗಳನ್ನು ವಿಶ್ವದ ಜನತೆಗೆ ಮುಟ್ಟಿಸುವ ಕೆಲಸ ಒಂದೆಡೆಯಾದರೆ, ಅವರ ಪ್ರತಿಮೆಗಳ ಅನಾವರಣ ಇಂದಿನ ಯುವಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗುವುದರಲ್ಲಿ ಯಾವ ಸಂದೇಹವು ಇಲ್ಲ.

ನಮ್ಮ ನಾಡಿನ ಸ್ವಾಭಿಮಾನದ ಪ್ರತೀಕವಾಗಿರುವ ಬಸವಣ್ಣನವರ ಪ್ರತಿಮೆಯನ್ನು ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪನೆಗೊಳಿಸಬೇಕೆಂಬುದು ಬಹುದಿನಗಳ ಕನಸಾಗಿತ್ತು. ಅದು ಯಡಿಯೂರಪ್ಪನವರ ಇಚ್ಛಾಶಕ್ತಿಯಿಂದ ಚಾಲನೆಗೊಳ್ಳುತ್ತಿರುವುದು ಸಮಸ್ತ ನಾಡಿಗೆ ಹೆಮ್ಮೆ, ಅಭಿಮಾನ ತಂದಿದೆ. ನೆನಗುದಿಗೆ ಬಿದ್ದಿದ್ದ ಈ ಮಹತ್ ಕಾರ್ಯವನ್ನು ಕಾರ್ಯರೂಪಕ್ಕೆ ತಂದಿರುವುದು ಸ್ವಾಗತಾರ್ಹ ಎಂದು ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.

120ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button